ಡಾ.ಕೃತಿಕಾ ಹತ್ಯೆಗೆ ವಿಕ್ಟೋರಿಯಾದಿಂದಲೇ ಅರಿವಳಿಕೆ ಮದ್ದು ತಂದಿದ್ದ ಪತಿ

| N/A | Published : Oct 17 2025, 01:00 AM IST / Updated: Oct 17 2025, 08:29 AM IST

Bengaluru Dr Kruthika reddy
ಡಾ.ಕೃತಿಕಾ ಹತ್ಯೆಗೆ ವಿಕ್ಟೋರಿಯಾದಿಂದಲೇ ಅರಿವಳಿಕೆ ಮದ್ದು ತಂದಿದ್ದ ಪತಿ
Share this Article
  • FB
  • TW
  • Linkdin
  • Email

ಸಾರಾಂಶ

ಚರ್ಮ ರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಹತ್ಯೆಗೆ ಬಳಸಲಾದ ‘ಅರಿವಳಿಕೆ ಚುಚ್ಚುಮದ್ದು’ ಅನ್ನು ಮೃತಳ ಪತಿ, ಆರೋಪಿ ಡಾ.ಜಿ,ಎಸ್‌. ಮಹೇಂದ್ರ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ತಂದು ನಿಯಮ ಬಾಹಿರವಾಗಿ ಬಳಸಿದ್ದಾನೆ ಎಂದು ಮಾರತ್ತಹಳ್ಳಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

  ಬೆಂಗಳೂರು :  ಚರ್ಮ ರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಹತ್ಯೆಗೆ ಬಳಸಲಾದ ‘ಅರಿವಳಿಕೆ ಚುಚ್ಚುಮದ್ದು’ ಅನ್ನು ಮೃತಳ ಪತಿ, ಆರೋಪಿ ಡಾ.ಜಿ,ಎಸ್‌. ಮಹೇಂದ್ರ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ತಂದು ನಿಯಮ ಬಾಹಿರವಾಗಿ ಬಳಸಿದ್ದಾನೆ ಎಂದು ಮಾರತ್ತಹಳ್ಳಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಈ ಮಾಹಿತಿ ಹಿನ್ನೆಲೆಯಲ್ಲಿ ಅರಿವಳಿಕೆ ಮದ್ದು ಸಂಬಂಧ ವಿವರಣೆ ನೀಡುವಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ತನಿಖಾಧಿಕಾರಿ ಪತ್ರ ಬರೆಯಲಿದ್ದು, ಅವರ ಪ್ರತಿಕ್ರಿಯೆ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಪೊಲೀಸರು ಯೋಜಿಸಲಿದ್ದಾರೆ ಎಂದು ತಿಳಿದು ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿ ಮಹೇಂದ್ರ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದ. ಸರ್ಜನ್‌ ಆಗಿದ್ದ ಕಾರಣಕ್ಕೆ ಆಸ್ಪತ್ರೆಯಲ್ಲಿ ಮುಕ್ತವಾಗಿ ವ್ಯವಹರಿಸಲು ಆತನಿಗೆ ಅವಕಾಶ ಸಿಕ್ಕಿತ್ತು. ಇದನ್ನು ದುರ್ಬಳಕೆ ಮಾಡಿಕೊಂಡು ಶಸ್ತ್ರ ಚಿಕಿತ್ಸಾ ವಿಭಾಗದಿಂದ ರೆಡ್ಡಿ ಅರಿವಳಿಕೆ ಚುಚ್ಚು ಮದ್ದು ತೆಗೆದುಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪತ್ನಿಯ ಬಲಗಾಲಿಗೆ ಹೆಚ್ಚಿನ ಪ್ರಮಾಣದ ಅರಿವಳಿಕೆಯನ್ನು ಮಹೇಂದ್ರ ರೆಡ್ಡಿ ನೀಡಿದ್ದಾನೆ. ಇದರಿಂದ ದೇಹದ ಅಂಗಾಂಗಳು ವೈಫಲ್ಯವಾಗಿ ಕೃತಿಕಾ ರೆಡ್ಡಿ ಮೃತಪಟ್ಟಿದ್ದಾರೆ. ತನ್ನ ಪತಿಯ ಮೇಲೆ ವಿಪರೀತ ನಂಬಿಕೆಯಿಂದ ಆಕೆಗೆ ಮಹೇಂದ್ರ ರೆಡ್ಡಿ ಚಿಕಿತ್ಸೆ ಬಗ್ಗೆ ಶಂಕೆ ಮೂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌, ಕಂಪ್ಯೂಟರ್ ಜಪ್ತಿ

ಗಂಜೂರಿನಲ್ಲಿರುವ ಮಹೇಂದ್ರ ರೆಡ್ಡಿ ನಿವಾಸದಲ್ಲಿ ಪೊಲೀಸರು ಗುರುವಾರ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತನ ಬೆಡ್‌ ರೂಮ್‌ನಲ್ಲಿದ್ದ ಲ್ಯಾಪ್‌ಟಾಪ್ , ಹಾರ್ಡ್‌ ಡಿಸ್ಕ್ ಹಾಗೂ ಕಂಪ್ಯೂಟರ್ ಸೇರಿದಂತೆ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಪರಿಶೀಲನೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ತಾನು ಕೊಲೆ ಮಾಡಿಲ್ಲವೆಂದ ರೆಡ್ಡಿ:

ತಾನು ಕೊಲೆ ಮಾಡಿಲ್ಲ. ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ವಿಚಾರಣೆ ವೇಳೆ ಮಹೇಂದ್ರ ರೆಡ್ಡಿ ಅಲವತ್ತುಕೊಂಡಿರುವುದಾಗಿ ತಿಳಿದು ಬಂದಿದೆ. ವಿಚಾರಣೆಗೆ ಆತ ಪೂರಕವಾಗಿ ಸ್ಪಂದಿಸುತ್ತಿಲ್ಲ. ಒಂದೊಂದು ಬಾರಿ ವಿಭಿನ್ನ ಹೇಳಿಕೆ ನೀಡುತ್ತಾನೆ. ತನಗೇನು ಗೊತ್ತೇ ಇಲ್ಲ. ನಾನು ಕೊಲೆ ಮಾಡಿಯೇ ಇಲ್ಲ ಎಂದು ರೆಡ್ಡಿ ಹೇಳುತ್ತಿದ್ದಾನೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ತನಿಖೆ ಸಲುವಾಗಿ ಆರೋಪಿಯನ್ನು 9 ದಿನಗಳು ಪೊಲೀಸ್ ಕಸ್ಟಡಿಗೆ ಪಡೆದಿದ್ದು, ವಿವರವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಾಹಕ್ಕೂ ಮುನ್ನ ಅನಾರೋಗ್ಯ?

ವಿವಾಹಕ್ಕೂ ಮುನ್ನವೇ ಮೃತ ಡಾ. ಕೃತಿಕಾ ರೆಡ್ಡಿ ಅವರಿಗೆ ಅನಾರೋಗ್ಯ ಸಮಸ್ಯೆ ಇತ್ತು ಎಂದು ಆರೋಪಿ ಮಹೇಂದ್ರ ರೆಡ್ಡಿ ಹೇಳಿರುವುದಾಗಿ ತಿಳಿದು ಬಂದಿದೆ. ಆದರೆ ತಮ್ಮ ಮಗಳಿಗೆ ಲೋ ಬಿಪಿ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಇತ್ತು. ಇದರ ಹೊರತುಪಡಿಸಿ ಆಕೆಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಪೊಲೀಸರಿಗೆ ಮೃತಳ ಕುಟುಂಬದವರು ಸ್ಪಷ್ಟಪಡಿಸಿದ್ದಾರೆ.

ಕೃತಿಕಾ ಪರಿವಾರವೇ ವೈದ್ಯರ ಕುಟುಂಬ:

ಮೃತ ಕೃತಿಕಾ ಕುಟುಂಬ ವೈದ್ಯರ ಕುಟುಂಬವಾಗಿದೆ. ಮೃತ ಕೃತಿಕಾ ಚರ್ಮರೋಗ ತಜ್ಞೆಯಾಗಿದ್ದರೆ, ಆಕೆಯ ಸೋದರಿ ಡಾ.ನಿಖಿತಾ ಹಾಗೂ ಚಿಕ್ಕಮ್ಮ ಸಹ ವೈದ್ಯರಾಗಿದ್ದಾರೆ. ಹೀಗಾಗಿಯೇ ವೈದ್ಯನಾಗಿದ್ದ ಕಾರಣಕ್ಕೆ ಮಹೇಂದ್ರ ರೆಡ್ಡಿ ಜತೆ ಕೃತಿಕಾ ಮದುವೆಯನ್ನು ಆಕೆಯ ಪೋಷಕರು ನಿಶ್ಚಿಯಿಸಿದ್ದರು ಎಂದು ತಿಳಿದು ಬಂದಿದೆ.

Read more Articles on