ಸ್ನೇಹಿತಗೆ ಸುಪಾರಿ ಕೊಟ್ಟು ಪತ್ನಿಯ ಕೊಲ್ಲಿಸಿದ ಪತಿ

| Published : Feb 10 2024, 01:45 AM IST / Updated: Feb 10 2024, 08:30 AM IST

crime 1
ಸ್ನೇಹಿತಗೆ ಸುಪಾರಿ ಕೊಟ್ಟು ಪತ್ನಿಯ ಕೊಲ್ಲಿಸಿದ ಪತಿ
Share this Article
  • FB
  • TW
  • Linkdin
  • Email

ಸಾರಾಂಶ

ಶೀಲದ ಮೇಲೆ ಶಂಕೆ ಪಟ್ಟು ಪತ್ನಿಯ ಕೊಲೆಗೆ ಸ್ನೇಹಿತನಿಗೇ ಸುಪಾರಿ ಕೊಟ್ಟು ಕೊಲ್ಲಿಸಿದ್ದ ಪತಿಯ ಬಂಧನ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್‌ನ ಶ್ರೀಕಂಠೇಶ್ವರನಗರದಲ್ಲಿ ನಡೆದ ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಆಕೆಯ ಪತಿಯೇ ತನ್ನ ಸ್ನೇಹಿತನಿಗೆ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. 

ಈ ಸಂಬಂಧ ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು ಮೃತಳ ಪತಿ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.

ಶ್ರೀಕಂಠೇಶ್ವರನಗರದ ಶಿವಶಂಕರ್‌(44) ಮತ್ತು ಹುಣಸಮಾರನಹಳ್ಳಿಯ ವಿನಯ್‌(35) ಬಂಧಿತರು. ಫೆ.5ರಂದು ಆರೋಪಿ ಶಿವಶಂಕರ್‌ ಪತ್ನಿ ಪುಷ್ಪಲತಾ(35) ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 

ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿ ಕಂಡರೂ ಪೊಲೀಸರು ಅನುಮಾನಗೊಂಡು ಕೊಲೆ ಪ್ರಕರಣ ದಾಖಲಿಸಿ ತನಿಖೆ ಮಾಡಿದಾಗ, ಪತಿ ಶಿವಶಂಕರ್‌ ತನ್ನ ಸ್ನೇಹಿತ ವಿನಯ್‌ಗೆ ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಪತ್ನಿಯ ಶೀಲದ ಮೇಲೆ ಶಂಕೆ: ಕೊಲೆಯಾದ ಪುಷ್ಪಲತಾ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಆರೋಪಿ ಶಿವಶಂಕರ್‌ ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದ. ಮನೆಯಲ್ಲಿ ಪತ್ನಿಯ ಚಲನವಲನದ ಮೇಲೆ ನಿಗಾವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ. 

ಆದರೂ ಪತ್ನಿಯ ಮೇಲಿನ ಅನುಮಾನ ಕಡಿಮೆಯಾಗಲಿಲ್ಲ. ಹೀಗಾಗಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ತಾನೇ ಕೊಲೆ ಮಾಡಲು ಭಯಗೊಂಡು ಸ್ನೇಹಿತ ವಿನಯ್‌ನನ್ನು ಸಂಪರ್ಕಿಸಿ ಸುಪಾರಿ ನೀಡಿದ್ದ.

ಸಿಸಿಟಿವಿ ಆಫ್‌ ಮಾಡಿದ್ದ: ಆರೋಪಿ ಶಿವಶಂಕರ್‌ ಫೆ.5ರಂದು ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್‌ ಮಾಡಿ ಕೆಲಸಕ್ಕೆ ತೆರಳಿದ್ದ. ಪೂರ್ವಸಂಚಿನಂತೆ ಮನೆಗೆ ಬಂದ ವಿನಯ್‌, ಪುಷ್ಪಲತಾಳನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. 

ಬಳಿಕ ಕಿಟಕಿಗೆ ಮೃತದೇಹವನ್ನು ನೇಣು ಬಿಗಿದು ಪರಾರಿಯಾಗಿದ್ದ. ಸಂಜೆ ಮನೆಗೆ ಬಂದ ಪತಿ ಶಿವಶಂಕರ್‌, ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥ

ಳಕ್ಕೆ ದೌಡಾಯಿಸಿದ ಪೊಲೀಸರು, ಸೀನ್‌ ಆಫ್‌ ಕ್ರೈಂ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸಿದಾಗ, ಕೊಲೆಯ ಶಂಕೆ ವ್ಯಕ್ತವಾಗಿತ್ತು.

ಬಳಿಕ ಪತಿ ಶಿವಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಸ್ನೇಹಿತ ವಿನಯ್‌ಗೆ ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. 

ಬಳಿಕ ವಿನಯ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.ಬ್ಯಾಂಕ್‌ನಲ್ಲಿ ಪರಿಚಿತರು

ಆರೋಪಿಗಳಾದ ಶಿವಶಂಕರ್‌ ಮತ್ತು ವಿನಯ್‌ ಐದು ವರ್ಷದ ಹಿಂದೆ ಖಾಸಗಿ ಬ್ಯಾಂಕ್‌ವೊಂದರಲ್ಲಿ ಪರಸ್ಪರ ಪರಿಚಿತರಾಗಿದ್ದರು. ಬಳಿಕ ವಿನಯ್‌ ಒಂದೆರೆಡು ಬಾರಿ ಶಿವಶಂಕರ್‌ ಮನೆಗೆ ಬಂದು ಹೋಗಿದ್ದ.

 ಹೀಗಾಗಿ ಶಿವಶಂಕರ್‌ ತನ್ನ ಪತ್ನಿಯ ವಿಚಾರವನ್ನು ಆತನಿಗೆ ತಿಳಿಸಿ ಕೊಲೆಗೆ ಸುಪಾರಿ ನೀಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.ಆರೋಪಿ ಪತ್ತೆಗೆ 200 ಸಿಸಿ ಕ್ಯಾಮೆರಾ ಶೋಧ

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸುಮಾರು ಇನ್ನೂರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿ ವಿನಯ್‌ನ ಚಲನವಲನ ಸೆರೆಯಾಗಿರುವುದು ಕಂಡು ಬಂದಿದೆ. 

ಬಳಿಕ ಆರೋಪಿ ಶಿವಶಂಕರ್‌ಗೆ ಆ ವಿಡಿಯೋ ತೋರಿಸಿ ಪ್ರಶ್ನಿಸಿದಾಗ ಆತ ತನ್ನ ಸ್ನೇಹಿತ ವಿನಯ್‌ ಎಂದು ಹೇಳಿದ್ದಾನೆ. ಬಳಿಕ ಆತನಿಗೆ ತಾನು ಸುಪಾರಿ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ.ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ!

ಆರೋಪಿ ವಿನಯ್‌ನ ವಿಚಾರಣೆ ವೇಳೆ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವರ್ಷದ ತುರುವೇಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾಯಸಂದ್ರ ಕೆರೆಗೆ ವಿನಯ್‌ ಪತ್ನಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿತ್ತು. 

ಆದರೆ, ಆರೋಪಿ ವಿನಯ್‌ ವಿಚಾರಣೆ ವೇಳೆ ತಾನೇ ಪತ್ನಿಯನ್ನು ಕೆರೆಗೆ ನೂಕಿ ಕೊಲೆ ಮಾಡಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪೊಲೀಸರು ತುರುವೇಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.