ಸಾರಾಂಶ
ಬೆಂಗಳೂರು : ನಗರದಲ್ಲಿ ಯಾರಾದರೂ ಗೂಂಡಾ ಪ್ರವೃತ್ತಿ ತೋರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಎಚ್ಚರಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‌ನ ದಯಾನಂದ ಸಾಗರ್ ಕಾಲೇಜು ಆವರಣದಲ್ಲಿ ಶನಿವಾರ ನಡೆದ ನಗರ ದಕ್ಷಿಣ ವಿಭಾಗದ ಮಾಸಿಕ ಜನಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಗೂಂಡಾ ವರ್ತನೆ ಘಟನೆಗಳ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೆ, ಅಂತವರ ವಿರುದ್ಧ ಮುಲಾಜಿಲ್ಲದೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ಬೆಸ್ಕಾಂ ಕಾಮಗಾರಿಗಳ ಹೆಸರಿನಲ್ಲಿ ರಸ್ತೆಗಳನ್ನು ಹಾಳು ಮಾಡುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ಗುತ್ತಿಗೆದಾರರು ಜಗಳ ಮಾಡುತ್ತಾರೆ. ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಲವರು ದೂರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ನಾಗರಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ನಿರ್ದಿಷ್ಟ ಘಟನೆಗಳು ಇದ್ದಲ್ಲಿ ದೂರು ನೀಡಿದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಡ್ರಗ್ಸ್ ನಿಯಂತ್ರಣಕ್ಕೆ ಸಾರ್ವಜನಿಕರ ಮನವಿ
ಪುಟ್ಟೇನಹಳ್ಳಿ, ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿದಂತೆ ವಿವಿಧೆಡೆ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಈ ಡ್ರಗ್ಸ್ ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಕೆಲ ಸಂಘಟನೆಗಳ ಮುಖಂಡರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತರು, ನಗರದಲ್ಲಿ ಡ್ರಗ್ಸ್ ತಡೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸರ ಜತೆಗೆ ಸಾರ್ವಜನಿಕರು ಕೈ ಜೋಡಿಸಬೇಕು. ಯುವಕರಲ್ಲಿ ಡ್ರಗ್ಸ್ ಬಗ್ಗೆ ತಿಳುವಳಿಕೆ, ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಸಂಚಾರ ಸಮಸ್ಯೆಗಳ ಬಗ್ಗೆ ದೂರು
ಬನಶಂಕರಿ, ಮಿನಾಜ್‌ನಗರ, ಪುಟ್ಟೇನಹಳ್ಳಿ, ಕುಮಾರಸ್ವಾಮಿ ಲೇಔಟ್, ಜೆ.ಪಿ.ನಗರ ಸೇರಿದಂತೆ ವಿವಿಧ ಕಡೆಗೆ ಸಂಚಾರ ಸಮಸ್ಯೆ, ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ, ಏಕಮುಖ ಸಂಚಾರದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನಸಂಪರ್ಕ ಸಭೆಯಲ್ಲಿ ಗಮನ ಸೆಳೆಯಲಾಯಿತು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ದಯಾನಂದ್ ಸೂಚಿಸಿದರು.
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಸಾರ್, ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.