ಸಾರಾಂಶ
ಬೆಂಗಳೂರು : ಇತ್ತೀಚೆಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ(ಕೆಎಸ್‌ಆರ್) ಟ್ಯಾಕ್ಸಿ ಪಾರ್ಕಿಂಗ್ ಸ್ಥಳದಲ್ಲಿ ಪತ್ತೆಯಾಗಿದ್ದ ಬಾಲಕಿಯ ಮೃತದೇಹದ ಗುರುತನ್ನು ರೈಲ್ವೆ ಪೊಲೀಸರು ಪತ್ತೆಯಾಗಿದ್ದಾರೆ.
ಮೃತ ಬಾಲಕಿ ಮರಿಯಮ್ (5) ಎಂದು ಗುರುತಿಸಲಾಗಿದೆ. ಜು.3ರಂದು ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್ ಸ್ಥಳದಲ್ಲಿ ಐದು ವರ್ಷದ ಅಪರಿಚಿತ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ದುಷ್ಕರ್ಮಿಗಳು ಬಾಲಕಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ರೈಲ್ವೆ ಪೊಲೀಸರು, ಇದೀಗ ಆ ಬಾಲಕಿ ಹಾಗೂ ಬಾಲಕಿಯ ತಂದೆ-ತಾಯಿಯ ಗುರುತನ್ನೂ ಪತ್ತೆಹಚ್ಚಿದ್ದಾರೆ.
ಹೀನಾ ಅಲಿಯಾಸ್ ಕಾಳಿ ಮತ್ತು ಶಿವು ದಂಪತಿಯ ಪುತ್ರಿಯೇ ಈ ಕೊಲೆಯಾದ ಮರಿಯಮ್ ಎಂದು ತಿಳಿದು ಬಂದಿದೆ. ಹೀನಾ, ರಾಜು ಅಲಿಯಾಸ್ ಮಣಿಕಂಠ ಎಂಬಾತನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ಪತಿ ಶಿವುನನ್ನು ತೊರೆದು ಪ್ರಿಯಕರ ರಾಜು ಜತೆಗೆ ಭಿಕ್ಷಾಟನೆ ಮಾಡಿಕೊಂಡು ಓಡಾಡುತ್ತಿದ್ದಳು. ಕೊಲೆಯಾದ ಮರಿಯಮ್ ಸಹ ಹೀನಾ ಮತ್ತು ರಾಜು ಜತೆಗೆ ಇದ್ದಳು ಎಂದು ತಿಳಿದು ಬಂದಿದೆ.
ಅನೈತಿಕ ಸಂಬಂಧಕ್ಕೆಅಡ್ಡಿಯಾಗಿದ್ದಕ್ಕೆ ಹತ್ಯೆ?
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮರಿಯಮ್‌ನನ್ನು ಹೀನಾ ಮತ್ತು ರಾಜು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರಿಯಮ್ ಮೃತದೇಹ ಪತ್ತೆಯಾದ ದಿನದಿಂದಲೂ ಹೀನಾ ಮತ್ತು ರಾಜು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ರೈಲ್ವೆ ಪೊಲೀಸರು ಈ ಇಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಇಬ್ಬರ ಬಗ್ಗೆ ಮಾಹಿತಿ ಇದ್ದರೆ ತಿಳಿಸುವಂತೆ ರೈಲ್ವೆ ಪೊಲೀಸರು ಸಾರ್ವಜನಿಕರಲ್ಲಿ ಕೋರಿದ್ದಾರೆ.