ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ

| N/A | Published : Aug 05 2025, 01:30 AM IST / Updated: Aug 05 2025, 07:51 AM IST

ಸಾರಾಂಶ

ಅಂತಾರಾಷ್ಟ್ರೀಯ ದೂರವಾಣಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಂತರ ರು. ವಂಚಿಸಿದ್ದ ಇಬ್ಬರು ಕಿಡಿಗೇಡಿಗಳನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಅಂತಾರಾಷ್ಟ್ರೀಯ ದೂರವಾಣಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಂತರ ರು. ವಂಚಿಸಿದ್ದ ಇಬ್ಬರು ಕಿಡಿಗೇಡಿಗಳನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ರಾಜ್ಯದ ಮಲ್ಲಪ್ಪುರಂನ ಮೊಹಮ್ಮದ್ ಸಫಾಪ್‌ ಕುರುನಿಯನ್‌ ಹಾಗೂ ಕೊಡಗು ಜಿಲ್ಲೆ ಸೋಮವಾರಪೇಟೆಯ ಎಂ.ಎ.ಫಯಾಜ್ ಬಂಧಿತನಾಗಿದ್ದು, ಆರೋಪಿಗಳಿಂದ ರಹಸ್ಯ ಟೆಲಿಫೋನ್ ಎಕ್ಸೆಂಜ್‌, ಸಿಮ್ ಬಾಕ್ಸ್‌ಗಳು, ಮೊಬೈಲ್, 6 ರೌಟರ್‌ಗಳು, ಒಂದು ಲ್ಯಾಪ್‌ಟಾಪ್ ಹಾಗೂ 706 ಸಿಮ್‌ಗಳು ಸೇರಿದಂತೆ 10 ಲಕ್ಷ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.

ಈ ವಶಪಡಿಸಿಕೊಂಡ ಸಿಮ್ ಕಾರ್ಡ್‌ಗಳನ್ನು ಇತರೆ ಸೈಬರ್ ಅಪರಾಧಗಳಿಗೂ ಬಳಸಿರುವ ಶಂಕೆಯಿದ್ದು, ತನಿಖೆ ಮುಂದುವರೆದಿದೆ. ಅಲ್ಲದೆ ಸರಕಾರ ಹಾಗೂ ದೂರಸಂಪರ್ಕ ಕಂಪನಿಗಳಿಗೆ ಆಗಿರುವ ಕೋಟ್ಯಾಂತರ ರು ನಷ್ಟದ ಪ್ರಮಾಣವನ್ನು ಲೆಕ್ಕಹಾಕಬೇಕಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ ತಿಳಿಸಿದ್ದಾರೆ.

ಹೇಗೆ ವಂಚನೆ?:

ವೈಟ್‌ಫೀಲ್ಡ್ ಸಮೀಪದ ಇಮ್ಮದಿಹಳ್ಳಿ ಮುಖ್ಯರಸ್ತೆಯ ರಾಮಮಂದಿರದ ಬಳಿ ಕೆಲವರು ಸಿಮ್‌ ಬಾಕ್ಸ್‌ಗಳಲ್ಲಿ ಸಿಮ್ ಕಾರ್ಡ್‌ಗಳನ್ನು ಬಳಸಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟು ಮಾಡುವ ರೀತಿ ಕಂಪನಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದಾರೆ. ಮಾನ್ಯತೆ ಇಲ್ಲದ ಟೆಲಿಫೋನ್ ಎಕ್ಸ್‌ಚೇಂಜ್‌ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭಾರತಿ ಏರ್‌ಟೆಲ್ ಲಿಮಿಟೆಡ್‌ನ ನೊಡಲ್ ಅಧಿಕಾರಿ ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣದ ತನಿಖೆಗಿಳಿದ ಸೈಬರ್ ಕ್ರೈಂ ಠಾಣೆ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕೇರಳದ ಮಲಪ್ಪುರಂನ ಮೊಹಮ್ಮದ್‌ನಲ್ಲಿ ವಶಕ್ಕೆ ಪಡೆದರು. ವಿಚಾರಣೆಯಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ದರದಲ್ಲಿ ಮಾರ್ಗ ಮಾಡಲು ಇಮ್ಮದಿಹಳ್ಳಿಯಲ್ಲಿ ಸಿಮ್ ಬಾಕ್ಸ್ ಸ್ಥಾಪಿಸಿರುವುದಾಗಿ ಆತ ಒಪ್ಪಿಕೊಂಡನು. ಬಳಿಕ ತನಿಖೆಯಲ್ಲಿ ಮತ್ತಿಬ್ಬರ ಪಾತ್ರ ಸಿಕ್ಕಿತು. 

ವಿದೇಶದಲ್ಲಿ ನೆಲೆಸಿರುವ ಆರೋಪಿ, ಪರದೇಶದಲ್ಲಿ ಸಣ್ಣಪುಟ್ಟ ಕೆಲಸ ಮಾಡಿರುವ ಬಡ ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಕುಟುಂಬದ ಜತೆ ಮಾತನಾಡಲು ದೂರವಾಣಿ ಸೇವೆ ಕಲ್ಪಿಸುವುದಾಗಿ ಹೇಳಿ ಹಣ ಪಡೆಯುತ್ತಿದ್ದ. ಬಳಿಕ ವೈಟ್‌ಫೀಲ್ಡ್‌ನ ಇಮ್ಮದಿಹಳ್ಳಿಯಲ್ಲಿದ್ದ ಮೊಹಮ್ಮದ್ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನು ಪರಿವರ್ತಿಸಿ ಸಂಪರ್ಕಿಸುತ್ತಿದ್ದ. ಇದಕ್ಕಾಗಿ ಇಮ್ಮದಿಹಳ್ಳಿಯ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆ ಪಡೆದು ಸಿಮ್ ಬಾಕ್ಸ್‌ಗಳನ್ನು ಬಳಸಿ ರಹಸ್ಯ ಟೆಲಿಫೋನ್ ಎಕ್ಸ್‌ಚೇಂಜ್‌ ಸ್ಥಾಪಿಸಿದ್ದರು. ವಿದೇಶದಿಂದ ಕೂರಿಯರ್ ಮೂಲಕ ಕಳುಹಿಸಲಾದ ಸಿಮ್ ಬಾಕ್ಸ್‌ಗಳನ್ನು ಬಳಸಿದ್ದರು. ಪ್ರತಿ ತಿಂಗಳು 4 ರಿಂದ 5 ಲಕ್ಷ ರು.ವರೆಗೆ ಹವಾಲಾ ಮಾರ್ಗದಿಂದ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Read more Articles on