ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಐಟಿ ಕುಣಿಕೆ?: 84 ಲಕ್ಷ ಹಣದ ಮೂಲ ಪತ್ತೆಗೆ ತನಿಖೆ

| Published : Sep 24 2024, 01:53 AM IST / Updated: Sep 24 2024, 06:13 AM IST

Actor Darshan

ಸಾರಾಂಶ

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಸಂಬಂಧಿಸಿದ 84 ಲಕ್ಷ ಹಣದ ಮೂಲ ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ಹಣವನ್ನು ತನ್ನ ವಶಕ್ಕೆ ನೀಡಬೇಕೆಂದು ಐಟಿ ಇಲಾಖೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

 ಬೆಂಗಳೂರು :  ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ನಟ ದರ್ಶನ್‌ಗೆ ಆದಾಯ ತೆರಿಗೆ ಇಲಾಖೆಯ (ಐಟಿ) ಕುಣಿಕೆಯೂ ಸುತ್ತಿಕೊಳ್ಳುವ ಸಾಧ್ಯತೆಯಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಲು ಬಳಕೆ ಮಾಡಲಾಗಿದೆ ಎನ್ನಲಾದ 84 ಲಕ್ಷ ಹಣ ಮೂಲ ಪತ್ತೆ ಹಚ್ಚಲು ಮುಂದಾಗಿರುವ ಆದಾಯ ತೆರಿಗೆ (ಐಟಿ) ಇಲಾಖೆ, ಹಣವನ್ನು ತನ್ನ ವಶಕ್ಕೆ ನೀಡಬೇಕು ಹಾಗೂ ಹಣದ ಮೂಲದ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ನಗರದ 57ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಈ ಕುರಿತು ಆದಾಯ ತೆರಿಗೆ ಇಲಾಖೆ ಪರ ವಕೀಲರು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಈ ಅರ್ಜಿಗೆ ತಮ್ಮದು ಯಾವುದೇ ಆಕ್ಷೇಪಣೆ ಇಲ್ಲ ಎಂದು ಕಾಮಾಕ್ಷಿ ಪಾಳ್ಯ ಠಾಣೆಯ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಅರ್ಜಿ ಸಂಬಂಧ ಮಂಗಳವಾರ ಆದೇಶ ಮಾಡುವುದಾಗಿ ನ್ಯಾಯಾಲಯ ತಿಳಿಸಿದೆ.ರೇಣುಕಸ್ವಾಮಿಯ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟ ದರ್ಶನ್‌ ಅವರು ಇತರೆ ಆರೋಪಿಗಳಿಗೆ 30 ಲಕ್ಷ ಹಣ ನೀಡಿದ್ದರು. ಈ ಹಣವು ಆರೋಪಿ ಪ್ರದೋಷ್‌ ಮನೆಯಿಂದ ಕಾಮಾಕ್ಷಿಪಾಳ್ಯ ಠಾಣಾ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದರು.

ನಂತರ ಪ್ರಕರಣದಲ್ಲಿ ದರ್ಶನ್ ಪಾತ್ರ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರ ಮನೆಯನ್ನು ತಪಾಸಣೆ ನಡೆಸಲಾಗಿತ್ತು. ಈ ವೇಳೆ 40 ಲಕ್ಷ ಹಣ ದೊರೆತಿತ್ತು. ಇನ್ನೂ ಆರೋಪಿ ಕೇಶವಮೂರ್ತಿ ಮನೆಯಲ್ಲಿ 5, ಅನುಕುಮಾರ್‌ ಮನೆಯಲ್ಲಿ 1.5 ಲಕ್ಷ ಹಣ ಸೇರಿದಂತೆ ಒಟ್ಟು 84 ಹಣವನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದರು.ಮಾಜಿ ಉಪ ಮೇಯರ್‌ ಮೋಹನ್‌ ರಾಜ್‌ ಅವರು ದರ್ಶನ್‌ ಅವರಿಗೆ ಸಾಲ ನೀಡಿದ್ದರು ಎಂದು ತನಿಖೆ ವೇಳೆ ಕಂಡುಬಂದಿತ್ತು. 

ಇನ್ನೂ ಇಷ್ಟು ಹಣವು ಸಿನಿಮಾದಲ್ಲಿ ನಟಿಸಿದ ಕಾರಣ ನಿರ್ಮಾಪಕರು ನೀಡಿದ್ದರು ಎಂದು ದಶನ್‌ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದರು. ಇದೀಗ ಈ 84 ಲಕ್ಷ ಹಣಕ್ಕೆ ಲೆಕ್ಕವಿಲ್ಲ ಎಂದು ಭಾವಿಸಿರುವ ಐಟಿ ಇಲಾಖೆ, ಹಣದ ಮೂಲ ಪತ್ತೆ ಮಾಡಲು ನಿರ್ಧರಿಸಿದೆ. ಆ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದೆ.