ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೀಡಿ, ಸಿಗರೇಟ್‌ಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಕೈದಿಗಳು ಜೈಲಿನ ಒಳಗಿರುವ ಆಡಳಿತ ಕಚೇರಿ ಎದುರು ಪ್ರತಿಭಟನೆಗಿಳಿದಿದ್ದಾರೆ.

ಬೇಡಿಕೆ- ಇತ್ತೀಚಿನ ಭಾರೀ ಅಕ್ರಮ ಬೆನ್ನಲ್ಲೇ ಮಾರಾಟ ಬಂದ್‌- ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಪ್ರತಿಭಟನೆ

---

ಬೆಂಗಳೂರಿನ ಪರಪ್ಪರ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡುತ್ತಿರುವ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು

ಈ ಬಗ್ಗೆ ಭಾರೀ ಆಕ್ರೋಶ ಬೆನ್ನಲ್ಲೇ ಜೈಲಲ್ಲಿ ಬಿಗಿ ಬಂದೋಬಸ್ತ್‌. ಜೈಲಿನೊಳಗೆ ಬೀಡಿ, ಸಿಗರೇಟ್‌ ಮಾರಾಟ ಪೂರ್ಣ ಬಂದ್‌

ಈ ಬಗ್ಗೆ ಕೈದಿಗಳಿಂದ ತೀವ್ರ ಆಕ್ರೋಶ. 3 ದಿನಗಳಿಂದ ತಿಂಡಿ, ಊಟ ಬಿಟ್ಟು ಜೈಲಿನೊಳಗಿನ ಆಡಳಿತ ಕಚೇರಿ ಬಳಿ ಪ್ರತಿಭಟನೆ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೀಡಿ, ಸಿಗರೇಟ್‌ಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಕೈದಿಗಳು ಜೈಲಿನ ಒಳಗಿರುವ ಆಡಳಿತ ಕಚೇರಿ ಎದುರು ಪ್ರತಿಭಟನೆಗಿಳಿದಿದ್ದಾರೆ.

ಬೀಡಿ, ಸಿಗರೇಟ್‌ ಬಂದ್‌ ಮಾಡಿರುವುದರಿಂದ ವಿಚಾರಣಾಧೀನ ಹಾಗೂ ಸಜಾಬಂಧಿಗಳು ಕಳೆದ ಮೂರು ದಿನಗಳಿಂದ ಊಟ-ತಿಂಡಿ ಬಿಟ್ಟು ಧರಣಿ ಮಾಡುತ್ತಿದ್ದು, ತಂಬಾಕು ಪದಾರ್ಥಗಳ ಮಾರಾಟಕ್ಕೆ ಅನುಮತಿ ನೀಡುವಂತೆ ಪಟ್ಟುಹಿಡಿದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಜೈಲಿನ ಕ್ಯಾಂಟೀನ್‌ನಲ್ಲಿ ಬೀಡಿ, ಸಿಗರೇಟ್‌ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ತಂಬಾಕು ಉತ್ಪನ್ನಗಳ ಮಾರಾಟ ಬಂದ್‌ ಮಾಡಲಾಗಿದೆ.

ನಿಷೇಧಿತ ವಸ್ತುಗಳು ಜೈಲಿಗೆ ಪೂರೈಕೆ ಆಗುವುದನ್ನು ನಿಯಂತ್ರಿಸಲು 20 ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ಶೋಧನಾ ತಂಡ ರಚಿಸಲಾಗಿತ್ತು. ಆ ತಂಡ ಇತ್ತೀಚೆಗೆ ತಪಾಸಣೆ ನಡೆಸಿ 50 ಮೊಬೈಲ್‌ಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ, ಸಿಗರೇಟ್‌ ಪೂರೈಕೆಗೆ ಕಡಿವಾಣ ಹಾಕಿತ್ತು. ಇದರಿಂದ ಅಸಮಾಧಾನಗೊಂಡಿರುವ ಕೈದಿಗಳು ಧರಣಿ ನಡೆಸಿ ಬೀಡಿ, ಸಿಗರೇಟ್‌ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಜೈಲು ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದಾಗ 50ಕ್ಕೂ ಹೆಚ್ಚು ಮೊಬೈಲ್‌ಗಳ ಜತೆಗೆ 22 ಸಿಮ್‌ ಕಾರ್ಡ್‌ಗಳು, 5 ಚಾರ್ಜರ್‌ಗಳು, 4 ಇಯರ್‌ ಬಡ್ಸ್‌, 49 ಸಾವಿರ ನಗದು, ಚಾಕು ಪತ್ತೆಯಾಗಿತ್ತು.