ಸಾರಾಂಶ
ಪಾಂಡವಪುರ : ತಾಲೂಕಿನಲ್ಲಿ ದಿನೇ ದಿನೇ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ತಾಲೂಕಿನ ಜಯಂತಿನಗರ ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ನಡೆದಿದೆ.
ಗ್ರಾಮದಲ್ಲಿ ಅನುಮಾನಸ್ಪದವಾಗಿ ಓಡಾಡಿಕೊಂಡು ಮನೆ ಬಾಗಿಲು ಬಡಿಯುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಬೈಲಕುಪ್ಪೆ ಗ್ರಾಮದ ನಿವಾಸಿ ಮಹೇಶ್ ಎಂದು ತಿಳಿದುಬಂದಿದೆ.
ಕಳೆದ ಮೂರ್‍ನಾಲ್ಕ ದಿನದ ಹಿಂದೆ ಜಯಂತಿ ನಗರ ಗ್ರಾಮದ ಸಮೀಪದಲ್ಲಿಯೇ ಒಂಟಿ ಮನೆಯೊಂದಕ್ಕೆ ದರೋಡೆ ನಡೆಸಲು ಮರ ಕತ್ತರಿಸುವ ಯಂತ್ರದೊಂದಿಗೆ ತೆರಳಿ ಮನೆ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿ ಆತನ ಪತ್ನಿಗೆ ಗಾಯಗೊಳಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಈ ಪ್ರಕರಣ ಇಡೀ ತಾಲೂಕನ್ನೇ ಬೆಚ್ಚಿಬೀಳಿಸಿತ್ತು,
ಒಂಟಿ ಮನೆಗಳಲ್ಲಿ ವಾಸಿಸುವ ಜನತೆಯಂತೂ ಸಾಕಷ್ಟು ಭಯಭೀತರಾಗಿದ್ದಾರೆ. ಆ ಪ್ರಕರಣ ಮಾಸುವ ಮುನ್ನವೆ ವ್ಯಕ್ತಿ ಜಯಂತಿ ನಗರ ಗ್ರಾಮದ ಬೀದಿಯಲ್ಲಿ ಅನುಮಾನಸ್ಪದವಾಗಿ ಓಡಾಡಿಕೊಂಡು ಬಾಗಿಲು ಬಡಿಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳತನ ಹೆಚ್ಚಳಕ್ಕೆ ಪೊಲೀಸರ ನಿರ್ಲಕ್ಷ್ಯ:
ತಾಲೂಕಿನಲ್ಲಿ ಕಳೆದ ಹಲವು ತಿಂಗಳಿಂದ ಕೊಲೆ, ದರೋಡೆ ಪ್ರಕರಣಗಳು ನಡೆಯುತ್ತಲೇ ಇವೆ. ಇದರೊಂದಿಗೆ ಪಟ್ಟಣದ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೈಕ್ ಕಳ್ಳತನ, ಮೋಟರ್ ಕಳ್ಳತನ, ದೇವಸ್ಥಾನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳನ್ನು ಏಡೆಮುರಿಕಟ್ಟುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.
ಕಳೆದ ಸೋಮವಾರ ಪಟ್ಟಣದ ಬೀರಶೆಟ್ಟಹಳ್ಳಿಯಲ್ಲಿ ಹಾಡುಹಗಲೇ ಕಳ್ಳರು ಬೈಕ್ ಕಳವು ಮಾಡಲು ಯತ್ನಿಸಿ ತಡೆಯಲು ಬಂದ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಅದೇ ದಿನ ರಾತ್ರಿ ತಾಲೂಕಿನ ಬೋರೆಮೇಗಳಕೊಪ್ಪಲು ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ 9 ಟಗರು, ಮೇಕೆಗಳನ್ನು ಕದ್ದು ಪರಾರಿಯಾಗಿದ್ದಾರೆ.
ಇದಲ್ಲದೇ, ತಾಲೂಕಿನಲ್ಲಿ ಸಾಕಷ್ಟು ದೇವಸ್ಥಾನಗಳ ಕಳವು ನಡೆದಿವೆ. ಇಂತಹ ಯಾವುದೇ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಬೀಟ್ ನಡೆಸುವುದು ಕಡಿಮೆಯಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತವೆ ಎಂದು ಸ್ಥಳೀಯರ ಆರೋಪಿಸುತ್ತಿದ್ದಾರೆ. ಇಂತಹ ಘಟನೆಗಳಿಂದ ಜನತೆ ಸಂಪೂರ್ಣ ಭಯದಿಂದ ವಾಸ ಮಾಡುವ ಸ್ಥಿತಿ ಎದುರಾಗಿದೆ. ಮುಂದಾದರೂ ಸಂಬಂಧಿಸಿ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಕೆಲಸ ಮಾಡುವ ಮೂಲಕ ದರೋಡೆ, ಕಳ್ಳತನ ಪ್ರಕರಣಗಳಿಗೆ ಕಠಿವಾಣ ಹಾಕಬೇಕಿ ಎಂದು ಜನತೆ ಒತ್ತಾಯಿಸಿದ್ದಾರೆ.