ಕಾರಿಗೆ ಕರ್ನಾಟಕ ರಾಜ್ಯ ಸಾರಿಗೆ ಬಸ್‌ ಡಿಕ್ಕಿ: ಚಾಲಕ ಸಾವು

| Published : May 21 2024, 12:32 AM IST / Updated: May 21 2024, 05:13 AM IST

ಸಾರಾಂಶ

ಮಳವಳ್ಳಿ ಪೇಟೆ ಬೀದಿಯ ನಿವಾಸಿ ಶಿವಣ್ಣ ಪುತ್ರ ಅಕ್ಷಯ್ (26) ಮೃತ ಕಾರು ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಕ್ಷಯ್ ಸ್ಥಳದಲ್ಲಿಯೇ ಕೊನೆಯುಸಿರೆಳದಿದ್ದಾರೆ. 

 ಮದ್ದೂರು  :  ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಳವಳ್ಳಿ ಮೂಲದ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಮದ್ದೂರು-ಮಳವಳ್ಳಿ ರಾಜ್ಯ ಹೆದ್ದಾರಿಯ ಸಾದೊಳಲು ಗೇಟ್ ಬಳಿ ಸೋಮವಾರ ಸಂಭವಿಸಿದೆ.

ಮಳವಳ್ಳಿ ಪೇಟೆ ಬೀದಿಯ ನಿವಾಸಿ ಶಿವಣ್ಣ ಪುತ್ರ ಅಕ್ಷಯ್ (26) ಮೃತ ಕಾರು ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಕ್ಷಯ್ ಸ್ಥಳದಲ್ಲಿಯೇ ಕೊನೆಯುಸಿರೆಳದಿದ್ದಾರೆ. ಕಾರಿನಲ್ಲಿದ್ದ ಮಳವಳ್ಳಿ ನಿವಾಸಿಗಳಾದ ಕಾಲೇಜು ವಿದ್ಯಾರ್ಥಿ ಮಧು (25), ಬೆಂಗಳೂರು ಖಾಸಗಿ ಕಂಪನಿ ಉದ್ಯೋಗಿ ಬಸವರಾಜು (25), ಮಾದೇಗೌಡ (25) ಹಾಗೂ ಎಂ.ಟಿ.ಮಧು ಕುಮಾರ್ ಅವರು ತೀವ್ರವಾಗಿ ಗಾಯಗೊಂಡಿದ್ದು ಎಲ್ಲರಿಗೂ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಸಾರಿಗೆ ಸಂಸ್ಥೆ ಬಸ್‌ನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮದ್ದೂರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಮೃತ ಕಾರು ಚಾಲಕ ಅಕ್ಷಯ್. ಗಾಯಾಳುಗಳಾದ ಮಧು, ಬಸವರಾಜು, ಮಾದೇಗೌಡ ಹಾಗೂ ಎಂ.ಟಿ. ಮಧು ಕುಮಾರ್ ಅವರು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇಗುಲದಲ್ಲಿ ದೇವರ ದರ್ಶನ ಪಡೆದ ನಂತರ ಮಳವಳ್ಳಿಗೆ ತಮ್ಮ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ವಾಪಸಾಗುತ್ತಿದ್ದರು.

ಮದ್ದೂರು-ಮಳವಳ್ಳಿ ರಸ್ತೆಯ ಸಾದೊಳಲು ಗೇಟ್ ಬಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಚಾಮರಾಜನಗರದಿಂದ ಕೊಳ್ಳೇಗಾಲ ಮಾರ್ಗವಾಗಿ ಬೆಂಗಳೂರಿಗೆ ವೇಗವಾಗಿ ತೆರಳುತ್ತಿದ್ದ ಚಾಮರಾಜನಗರ ವಿಭಾಗಕ್ಕೆ ಸೇರಿದ ಸಾರಿಗೆ ಸಂಸ್ಥೆ ಬಸ್ ಕಾರಿಗೆ ಅಪ್ಪಳಿಸಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಎಡ ಭಾಗದ ಹಳ್ಳಕ್ಕೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆ.

ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಹೆದ್ದಾರಿ ವಾಹನಗಳ ಚಾಲಕರು ಮತ್ತು ಪ್ರಯಾಣಿಕರು ಅಪಘಾತಕ್ಕೀಡಾದ ಕಾರಿನಲ್ಲಿದ್ದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಅಪಘಾತದಿಂದಾಗಿ ಮದ್ದೂರು ಮಳವಳ್ಳಿ ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸರ್ಕಲ್ ಇನ್ಸ್ಪೆಕ್ಟರ್ ಕೆ.ಆರ್.ಪ್ರಸಾದ್. ಪಿಎಸ್ಐ ಮಂಜುನಾಥ್, ಬೆಸಗರಹಳ್ಳಿ ಠಾಣೆ ಪಿಎಸ್ಐ ಮಲ್ಲಪ್ಪ ಕಂಬಾರ ಹಾಗೂ ಪೊಲೀಸ್ ಸಿಬ್ಬಂದಿ ಅಪಘಾತದ ಕಾರಿನಲ್ಲಿ ಸಿಲುಕಿದ್ದ ಚಾಲಕ ಅಕ್ಷಯ್ ಶವವನ್ನು ಹೊರತೆಗೆದು ವಾಹನವನ್ನು ಪೊಲೀಸ್ ಠಾಣೆಗೆ ರವಾನಿಸಿದರು.

ಈ ಸಂಬಂಧ ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡ ನಂತರ ಬಸ್ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ. ಡಿವೈಎಸ್ಪಿ ಕೃಷ್ಣಪ್ಪ. ಸಿಪಿಐ ಕೆ.ಆರ್. ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತ

 ಮದ್ದೂರು

ತಾಲೂಕಿನ ಸಾದೊಳಲು ಗೇಟ್ ಬಳಿ ಸೋಮವಾರ ಕಾರು ಮತ್ತು ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆ ಮಧ್ಯೆ ನಿಂತಿದ್ದ ಬಸ್ಸನ್ನು ಕ್ರೇನ್ ಸಹಾಯವಿಲ್ಲದೆ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಕ್ರೇನ್‌ ವ್ಯವಸ್ಥೆ ಮಾಡುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರೂ ಅವರು ಅಸಹಾಯಕತೆ ತೋರಿದರು. ಇದರಿಂದ ಮದ್ದೂರು-ಮಳವಳ್ಳಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಆಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು.

ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಾದೊಳಲು ಗೇಟ್ ಬಳಿ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಸಿಪಿಐ ಕೆ.ಆರ್. ಪ್ರಸಾದ್ ಹಾಗೂ ಪೊಲೀಸ್ ಸಿಬ್ಬಂದಿ ಅಪಘಾತಕ್ಕೀಡಾದ ಕಾರನ್ನು ಸಣ್ಣ ಕ್ರೇನ್ ಸಹಾಯದಿಂದ ಠಾಣೆಗೆ ರವಾನಿಸಿದರು. ಸಾರಿಗೆ ಬಸ್ಸನ್ನು ನಡು ರಸ್ತೆಯಿಂದ ತೆರವು ಮಾಡಲು ದೊಡ್ಡ ಗಾತ್ರದ ಕ್ರೇನ್ ಅಗತ್ಯವಾಗಿತ್ತು. ಈ ಬಗ್ಗೆ ಕ್ರೇನ್ ವ್ಯವಸ್ಥೆ ಮಾಡುವಂತೆ ಸಿಪಿಐ ಕೆ.ಆರ್.ಪ್ರಸಾದ್ ಸ್ಥಳದಲ್ಲಿದ್ದ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಉಡಾಫೆ ಉತ್ತರ ನೀಡಿದ ಸಾರಿಗೆ ಅಧಿಕಾರಿಗಳು ನಮ್ಮಲ್ಲಿ ಕ್ರೇನ್‌ ವ್ಯವಸ್ಥೆ ಇಲ್ಲ. ಬೆಂಗಳೂರಿನಿಂದ ಕ್ರೇನ್ ಕರಸಬೇಕಾಗಿದೆ ಎಂದರು. ಅಧಿಕಾರಿಗಳ ಈ ವರ್ತನೆಯಿಂದ ಬೇಸತ್ತ ಸಿಪಿಐ ಕೆ.ಆರ್.ಪ್ರಸಾದ್ ದೊಡ್ಡ ಕ್ರೇನ್‌ನ್ನು ಸ್ಥಳಕ್ಕೆ ಕರೆಸಿ ಅಪಘಾತ ಕೀಡಾಗಿದ್ದ ಸಾರಿಗೆ ಬಸ್ಸನ್ನು ತೆರೆವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.