ಕೇರಳ: ಕೆಸರಲ್ಲಿ ಸಿಕ್ಕ ನಗರದ 22 ಕಾರು ವಶಕ್ಕೆ!

| Published : Jul 15 2024, 01:58 AM IST / Updated: Jul 15 2024, 04:50 AM IST

ಸಾರಾಂಶ

ಜಾಲತಾಣದಲ್ಲಿ ನೋಡಿ ಕೇರಳದ ಬೆಟ್ಟವೊಂದಕ್ಕೆ ಚಾರಣ ಹೋಗಿದ್ದ ಬೆಂಗಳೂರಿನ 38 ಜನರಿದ್ದ 22 ವಾಹನಗಳು ಮಣ್ಣಿನಲ್ಲಿ ಸಿಲುಕಿವೆ. ನಿಷೇಧ ಇದ್ದರೂ ಬಂದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯ ನೆಡುಂಕಂದಮ್‌ನ ನಾಲುಮಾಲಾ ಬೆಟ್ಟಕ್ಕೆ ನಿರ್ಬಂಧ ಉಲ್ಲಂಘಿಸಿ ಪ್ರವಾಸಕ್ಕೆಂದು ಹೋಗಿದ್ದ ಬೆಂಗಳೂರಿನ 38 ಜನರ 22 ಜೀಪು/ಕಾರುಗಳು ಕೆಸರಿನಲ್ಲಿ ಸಿಲುಕಿ ಫಜೀತಿಕೀಡಾಗಿವೆ. ವಾಹನಗಳು ಕೆಸರಲ್ಲಿ ಸಿಕ್ಕಿ ಹಾಕಿಕೊಂಡಿದ್ದೇ ತಡ, ಕೇರಳ ಪೊಲೀಸರು 22 ಜೀಪು/ಕಾರುಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿದ್ದಾರೆ.

ನಾಲುಮಾಲ ಬೆಟ್ಟಕ್ಕೆ ಭದ್ರತಾ ದೃಷ್ಟಿಯಿಂದ ಚಾರಣವನ್ನು ನಿಷೇಧಿಸಲಾಗಿದೆ. ಆದರೂ ಬೆಂಗಳೂರಿನ 38 ಜನರು ಸೋಷಿಯಲ್‌ ಮೀಡಿಯಾ ನೋಡಿಕೊಂಡು ಚಾರಣಕ್ಕೆ ಆಗಮಿಸಿದ್ದರು. ಆದರೆ ಶುಕ್ರವಾರ ಸುರಿದ ಮಳೆಯ ಪರಿಣಾಮ 4 ಕಿ.ಮೀ ಸಾಗುತ್ತಿದ್ದಂತೆ ಕಾರುಗಳ ಚಕ್ರ ಕೆಸರಿನಲ್ಲಿ ಹೂತುಹೋಗಿವೆ. ಹೀಗಾಗಿ ಪ್ರವಾಸಿಗರು ಕಾಲ್ನಡಿಗೆಯಲ್ಲೇ ಪುಷ್ಪಕಂದಮ್‌ಗೆ ಮರಳಿ ಸ್ಥಳೀಯರ ಸಹಾಯ ಕೇಳಿದ್ದಾರೆ. ಆಗ ಪೊಲೀಸ್ ಹಾಗೂ ತೆರಿಗೆ ಅಧಿಕಾರಿಗಳ ಸಹಾಯದಿಂದ ವಾಹನಗಳನ್ನು ಕೆಸರಿನಿಂದ ಹೊರತೆಗೆಯಲಾಗಿದೆ.

ಆದರೆ, ಜಿಲ್ಲಾ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ ಪರಿಣಾಮ 22 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ನಲುಮಲ ಬೆಟ್ಟವು ಕಂದಾಯ ಇಲಾಖೆಯ ಒಡೆತನದಲ್ಲಿದ್ದು, ಅವರು ಕೊಟ್ಟ ದೂರಿನ ಆಧಾರದಲ್ಲಿ ಚಾರಣಿಗರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಟ್ಟದ ಬಗ್ಗೆ ಅವರಿಗೆ ಸಾಮಾಜಿಕ ಜಾಲತಾಣದಿಂದ ಮಾಹಿತಿ ದೊರಕಿತ್ತು’ ಎಂದು ನೆಡುಂಕಂದಮ್‌ ಪೊಲೀಸ್ ಠಾಣೆಯ ಅಧಿಖಾರಿ ಜೆರ್ಲಿನ್ ವಿ. ಹೇಳಿದ್ದಾರೆ. ಆದರೆ ನಿರ್ಬಂಧ ಸೂಚಿಸುವ ಯಾವುದೇ ಫಲಕಗಳನ್ನು ಮಾರ್ಗದಲ್ಲಿ ಅಳವಡಿಸಲಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.