ಮಾಟ ಮಂತ್ರ ಪೂಜೆ ನೆಪದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಬಳಿಕ ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇರೆಗೆ ಕೇರಳ ರಾಜ್ಯದ ಪ್ರತಿಷ್ಠಿತ ದೇವಾಲಯದ ಅರ್ಚಕನೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಮಾಟ ಮಂತ್ರ ಪೂಜೆ ನೆಪದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಬಳಿಕ ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇರೆಗೆ ಕೇರಳ ರಾಜ್ಯದ ಪ್ರತಿಷ್ಠಿತ ದೇವಾಲಯದ ಅರ್ಚಕನೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ತ್ರಿಶೂರ್‌ ಜಿಲ್ಲೆಯ ದೇವಾಲಯದ ಸಹಾಯಕ ಅರ್ಚಕ ಟಿ.ಎ. ಅರುಣ್ ಬಂಧಿತನಾಗಿದ್ದು, ಈ ಕೃತ್ಯಕ್ಕೆ ಸಹಕಾರ ನೀಡಿದ ಆರೋಪ ಪ್ರಧಾನ ಅರ್ಚಕ ಉನ್ನಿ ದಾಮೋದರನ್ ವಿರುದ್ಧ ಕೇಳಿ ಬಂದಿದೆ. ದೇವಾಲಯದಲ್ಲಿ ವಿಶೇಷ ಪೂಜೆ ನೆಪದಲ್ಲಿ ಮಹಿಳೆಯನ್ನು ಕರೆಸಿ ಅರ್ಚಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.

ಕೆಲ ದಿನಗಳ ಹಿಂದೆ ಕೇರಳದ ತ್ರಿಶೂರ್‌ನಲ್ಲಿರುವ ಆರೋಪಿಗಳ ದೇವಾಲಯಕ್ಕೆ ತನ್ನ ಸ್ನೇಹಿತೆಯೊಂದಿಗೆ ಸಂತ್ರಸ್ತೆ ತೆರಳಿದ್ದರು. ಆ ವೇಳೆ ಆಕೆಗೆ ಅರ್ಚಕ ಅರುಣ್ ಪರಿಚಯವಾಗಿದ್ದು, ತಮ್ಮ ವೈಯಕ್ತಿಕ ಕಷ್ಟಗಳ ಬಗ್ಗೆ ಆತನೊಂದಿಗೆ ಹಂಚಿಕೊಂಡಿದ್ದರು. ಆಗ ತಮ್ಮ ಸಮಸ್ಯೆಗಳ ನಿವಾರಣೆಗೆ ವಿಶೇಷ ಪೂಜೆ ಮಾಡಿಸಬೇಕು. ಇದಕ್ಕೆ 24 ಸಾವಿರ ವೆಚ್ಚವಾಗಲಿದೆ ಎಂದಿದ್ದ.

ಈ ಪ್ರಸ್ತಾಪಕ್ಕೆ ಸಂತ್ರಸ್ತೆ ಸಮ್ಮತಿಸಿದ್ದರು. ಬಳಿಕ ಮೊಬೈಲ್ ಸಂಖ್ಯೆಗಳು ಪರಸ್ಪರ ವಿನಿಮಯವಾಗಿವೆ. ಹಣ ಸಂದಾಯವಾದ ಬಳಿಕ ತಾವು ಹೇಳಿದ ದಿನ ದೇವಾಲಯಕ್ಕೆ ಬರುವಂತೆ ಸಂತ್ರಸ್ತೆಗೆ ಅರ್ಚಕ ಅರುಣ್ ತಿಳಿಸಿದ್ದ. ಇದಾದ ನಂತರ ಆಕೆಗೆ ಧಾರ್ಮಿಕ ಕಾರ್ಯದ ನೆಪದಲ್ಲಿ ರಾತ್ರಿ ವೇಳೆ ಕರೆ ಮಾಡಿ ಅರ್ಚಕ ಕಿರಿಕಿರಿ ಮಾಡುತ್ತಿದ್ದ. ಅಲ್ಲದೆ ಬೆತ್ತಲೆಯಾಗಿ ವಾಟ್ಸಾಪ್ ವಿಡಿಯೋ ಕರೆ ಮಾಡಿ ಆರೋಪಿ, ತಾವು ನಗ್ನವಾದರೆ ನಿಮಗೆ ವಿರೋಧಿಗಳು ಮಾಡಿಸಿರುವ ಮಾಟ ಮಂತ್ರವು ಕೊನೆಯಾಗಲಿದೆ ಎಂದಿದ್ದ.

ಇದಕ್ಕೆ ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದ್ದಳು. ಆಗ ನಾನು ಹೇಳಿದಂತೆ ನಗ್ನ ಪೂಜೆ ಮಾಡಿಸದೆ ಹೋದರೆ ನಿನ್ನ ಇಬ್ಬರು ಮಕ್ಕಳ ಪ್ರಾಣಕ್ಕೆ ಕುತ್ತು ಬರುವ ಪೂಜೆ ಮಾಡುವೆ ಎಂದು ಬೆದರಿಸಿದ್ದ. ಈ ಬೆದರಿಕೆಗೆ ಹೆದರಿ ಆಕೆ ನಗ್ನಳಾಗಿದ್ದಳು. ಆಗ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಆರೋಪಿ, ಬಳಿಕ ಇದೇ ವಿಡಿಯೋ ಮುಂದಿಟ್ಟುಕೊಂಡು ಸಂತ್ರಸ್ತೆಗೆ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದ. ತಾನು ಕರೆದಾಗಲೆಲ್ಲ ಕೇರಳದ ದೇವಾಲಯಕ್ಕೆ ಬರುವಂತೆ ಆತ ಹೆದರಿಸುತ್ತಿದ್ದ.

ಈ ಕಿರುಕಳ ಸಹಿಸಲಾರದೆ ಆತನ ಭೇಟಿಗೆ ಸಂತ್ರಸ್ತೆ ಹೋಗಿದ್ದಳು. ಆಗ ದೇವಾಲಯದಲ್ಲಿ ಮುಖ್ಯ ಅರ್ಚಕ ದಾಮೋದರ ಸಹ ಸಂತ್ರಸ್ತೆ ಜತೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಆರೋಪಿಸಲಾಗಿದೆ. ಈ ಅರ್ಚಕರ ಹಿಂಸೆ ಸಹಿಸಲಾರದೆ ಕೊನೆಗೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ಅದರನ್ವಯ ಎಫ್‌ಐಆರ್ ದಾಖಲಿಸಿ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.