ಸಾರಾಂಶ
ಬೆಂಗಳೂರು : ಮೊಮ್ಮಗಳ ಮೇಲೆ ತಾತನೇ ಅತ್ಯಾಚಾರ ನಡೆಸಿದ ಘೋರ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
6 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸೆಯಲಾಗಿದೆ. ಈ ಬಗ್ಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.
ಆರೋಪಿ, 60 ವರ್ಷದ ತಾತ ತಲೆಮರೆಸಿಕೊಂಡಿದ್ದಾನೆ. ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಸಂತ್ರಸ್ತೆಯ ತಂದೆಯನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಸಂತ್ರಸ್ತೆಯ ಅಜ್ಜಿ, ಇಬ್ಬರು ಚಿಕ್ಕಪ್ಪಂದಿರು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಘಟನೆಯನ್ನು ಮುಚ್ಚಿಡಲು ಆರೋಪಿಗಳು ಯತ್ನಿಸಿದ್ದರು. ಬಾಲಕಿಯ ತಾಯಿಗೆ ಆಮಿಷವೊಡ್ಡಿದ್ದರು. ಅವರಿಂದ ತಪ್ಪಿಸಿಕೊಂಡು ಬಂದ ತಾಯಿಯು ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂಲತಃ ತಮಿಳುನಾಡು ಮೂಲದ ಆರೋಪಿಗಳು ಹುಳಿಮಾವು ಸಮೀಪ ವೇಣುಗೋಪಾಲ್ ನಗರದಲ್ಲಿ ವಾಸವಾಗಿದ್ದರು. ಬುಧವಾರ ಮಗುವಿನ ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯ ಮೇಲೆ ತಾತ ಅತ್ಯಾಚಾರ ಎಸೆಗಿದಿದ್ದಾನೆ. ರಾತ್ರಿ ತಾಯಿ ಕೆಲಸದಿಂದ ಬಂದಾಗ ಮಗು ಹೊಟ್ಟೆ ನೋವು ಎಂದು ಹೇಳಿಕೊಂಡಿದೆ. ಮಾಮೂಲಿ ಹೊಟ್ಟೆ ನೋವು ಎಂದು ಮಗುವನ್ನು ತಾಯಿ ಸಮಾಧಾನ ಮಾಡಿದ್ದಾರೆ. ಆದರೆ ಬೆಳಗ್ಗೆ ಮಗುವಿಗೆ ರಕ್ತಸ್ರಾವ ಆಗಿದ್ದನ್ನು ಕಂಡ ತಾಯಿ ಗಾಬರಿ ಆಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಬಾಲಕಿಯ ತಾಯಿಗೆ ಆಮಿಷ ಒಡ್ಡಲಾಗಿತ್ತು ಎನ್ನಲಾಗಿದೆ. ತಾಯಿಯ ಬಳಿ ಮಗುವಿನ ತಂದೆ, ಅತ್ತೆ, ಮಾವ ಹಾಗೂ ಚಿಕ್ಕಂಪ್ಪದಿರು ‘ಮನೆಯನ್ನು ಮೊಮ್ಮಗಳ ಹೆಸರಿಗೆ ಬರೆಯುತ್ತೇವೆ. ಚಿನ್ನದ ಒಡವೆ ಕೊಡಿಸುತ್ತೇವೆ. ವಿಷಯ ಯಾರಿಗೂ ಗೊತ್ತಾಗಬಾರದು’ ಎಂದು ಆಮಿಷ ಒಡ್ಡಿದ್ದರು ಎಂದು ತಿಳಿದುಬಂದಿದೆ.
ಕೆಲಸಕ್ಕೆ ಹೊರಡುತ್ತೇನೆ. ಮಗುವನ್ನು ನೀವು ನೋಡಿಕೊಳ್ಳಿ ಎಂದು ಮನೆಯಲ್ಲೇ ಮಗುವನ್ನು ಬಿಟ್ಟ ತಾಯಿ ಮನೆಯಿಂದ ಉಪಾಯವಾಗಿ ಹೊರಗೆ ಬಂದಿದ್ದಾರೆ. ಬಳಿಕ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಜನರು ಮಗುವಿನ ಮನೆಗೆ ಹೋಗಿ ತಕ್ಷಣ ಮಗುವನ್ನು ತಮ್ಮ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಗುವಿನ ತಾಯಿ ಹುಳಿಮಾವು ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಈ ನಡುವೆ ಜನರು ಮನೆಗೆ ಬಂದಿದ್ದನ್ನು ಕಂಡ ತಾತ, ವಿಷಯ ಗಂಭೀರ ಸ್ವರೂಪ ಪಡೆಯುವುದನ್ನು ಕಂಡು ಪರಾರಿ ಆಗಿದ್ದಾನೆ. ಪೊಲೀಸರು ಅತ್ಯಾಚಾರ ಆರೋಪಿ ತಾತ, ಅತ್ತೆ, ಇಬ್ಬರು ಸಹೋದರರಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ತಾತನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.