ಅಪಹರಣ: 13 ತಾಸಲ್ಲೇ ಆರೋಪಿ ಸೆರೆ, ಬಾಲಕನ ರಕ್ಷಣೆ

| Published : Jun 19 2024, 01:01 AM IST

ಸಾರಾಂಶ

9 ವರ್ಷದ ಬಾಲಕನ ಅಪಹರಣ ಸಂಬಂಧ ಪ್ರಕರಣ ದಾಖಲಾದ 13 ತಾಸಿನೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಆರೋಪಿಯನ್ಹು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೀನಿಮಿಯಲ್ಲಿ ಶೈಲಿಯಲ್ಲಿ ನಡೆದಿದ್ದ 9 ವರ್ಷದ ಬಾಲಕನ ಅಪಹರಣ ಸಂಬಂಧ ಪ್ರಕರಣ ದಾಖಲಾದ 13 ತಾಸಿನೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು, ಆರೋಪಿಯ ಹೆಡೆಮುರಿ ಕಟ್ಟಿ ಬಾಲಕನನ್ನು ರಕ್ಷಿಸಿ ಪೋಷಕರ ಮಡಿಲು ಸೇರಿಸಿದ್ದಾರೆ.

ಎಲೆಕ್ಟ್ರಾನಿಕ್‌ಸಿಟಿಯ ಪ್ರಗತಿನಗರದ ಜಸ್ಮುದ್ದೀನ್‌ ಶೇಕ್‌(23) ಬಂಧಿತ. ಆರೋಪಿಯು ಜೂ.17ರ ಸಂಜೆ ಪ್ರಗತಿನಗರದ ನರೇಶ್‌ ಕುಮಾವತ್‌ ಅವರ ಪುತ್ರ ಸೂರಜ್‌ ಕುಮಾವತ್‌(9) ನನ್ನು ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆ ಇರಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಎಲೆಕ್ಟ್ರಾನಿಕ್‌ಸಿಟಿ ಠಾಣೆ ಇನ್‌ಸ್ಪೆಕ್ಟರ್‌ ನವೀನ್‌ ಅವರ ನೇತೃತ್ವದಲ್ಲಿ ಕ್ಷಿಪ್ತ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 13 ತಾಸಿನೊಳಗೆ ಆರೋಪಿಯನ್ನು ಬಂಧಿಸಿ, ಬಾಲಕನನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ರಾಜಸ್ಥಾನ ಮೂಲದ ನರೇಶ್‌ ಕುಮಾವತ್‌ ಅವರು ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಪ್ರಗತಿನಗರದಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಹೊಂದಿದ್ದು, ಮಳಿಗೆ ಸಮೀಪದ ಮನೆಯಲ್ಲಿ ಕುಟುಂಬದ ಜತೆಗೆ ನೆಲೆಸಿದ್ದಾರೆ. ಸೋಮವಾರ(ಜೂ.17) ಸಂಜೆ ಸುಮಾರು 6 ಗಂಟೆಯಲ್ಲಿ ನರೇಶ್‌ ಕುಮಾವತ್‌ ಅವರ ಪುತ್ರ ಸೂರಜ್‌ ಕುಮಾವತ್‌ ಸೇರಿ ಮೂವರು ಬಾಲಕರು ಮಳಿಗೆ ಬಳಿ ಆಟವಾಡುತ್ತಿದ್ದರು.

ಈ ವೇಳೆ ಆರೋಪಿ ಜಸ್ಮುದ್ದೀನ್‌ ಶೇಕ್‌ ಅಲ್ಲಿಗೆ ಬಂದಿದ್ದಾನೆ. ನನ್ನ ಬರ್ತ್‌ಡೇ ಇದ್ದು, ಕೇಕ್‌ ಕೊಡುವುದಾಗಿ ಮೂವರು ಬಾಲಕರನ್ನು ಸಿನಿಮೀಯ ಶೈಲಿಯಲ್ಲಿ ಕರೆದಿದ್ದಾನೆ. ಆದರೆ, ಮೂವರ ಪೈಕಿ ಸೂರಜ್‌ ಮಾತ್ರ ಕೇಕ್‌ ತಿನ್ನುವ ಆಸೆಗೆ ಆರೋಪಿ ಜತೆಗೆ ತೆರಳಿದ್ದಾನೆ. ಸುಮಾರು ಇನ್ನೂರು ಮೀಟರ್‌ ಸೂರಜ್‌ನನ್ನು ಮುಂದಕ್ಕೆ ಕರೆದೊಯ್ದು ಆರೋಪಿಯು ಬಳಿಕ ರಾಪಿಡೋದಲ್ಲಿ ಆಟೋ ಬುಕ್‌ ಮಾಡಿ ರಾತ್ರಿ 9 ಗಂಟೆ ವರೆಗೂ ಹಲವೆಡೆ ಸುತ್ತಾಡಿಸಿದ್ದಾನೆ. ಬಳಿಕ ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ಸೂರಜ್‌ನನ್ನು ಕರೆತಂದಿದ್ದಾನೆ.

ಬಳಿಕ ಆರೋಪಿಯು ಸೂರಜ್‌ನಿಂದಲೇ ತಂದೆ ನರೇಶ್‌ ಕುಮಾವತ್‌ ಅವರ ಮೊಬೈಲ್ ಸಂಖ್ಯೆ ಪಡೆದಿದ್ದಾನೆ. ನಂತರ ರಾತ್ರಿ ಸುಮಾರು 9.30ಕ್ಕೆ ವಾಟ್ಸಾಪ್‌ ಕರೆ ಮಾಡಿ, ನಾನು ನಿಮ್ಮ ಮಗನನ್ನು ಅಪಹರಣ ಮಾಡಿದ್ದೇನೆ. ₹10 ಲಕ್ಷ ಕೊಟ್ಟರಷ್ಟೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾನೆ. ಹಣ ಕೊಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕರೆ ಸ್ಥಗಿತಗೊಳಿಸಿದ್ದಾನೆ.

ಅಲ್ಲಿಯವರೆಗೂ ಮಗ ಎಲ್ಲೋ ಆಟವಾಡುತ್ತಿದ್ದಾನೆ ಎಂದು ತಿಳಿದು ಮನೆಯ ಸುತ್ತಮುತ್ತ ಹುಡುಕಾಡುತ್ತಿದ್ದ ನರೇಶ್‌ ಕುಟುಂಬದವರು ಅಪಹರಣದ ವಿಚಾರ ಗೊತ್ತಾಗಿ ರಾತ್ರಿ 11 ಗಂಟೆಗೆ ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆರೋಪಿಯು ಮೊಬೈಲ್‌ ಇಂಟರ್‌ನೆಟ್‌ ಡೇಟಾ ಆಫ್‌ ಮಾಡಿಕೊಂಡು ವೈಫೈ ಸಂಪರ್ಕದಲ್ಲಿ ವಾಟ್ಸಾಪ್‌ ಕಾಲ್‌ ಮಾಡುತ್ತಿದ್ದರಿಂದ ಆತನ ಸುಳಿವು ಪತ್ತೆಹಚ್ಚುವುದು ಆರಂಭದಲ್ಲಿ ಕೊಂಚ ಕಷ್ಟವಾಗಿದೆ. ಆದರೂ ಪೊಲೀಸರು ತಾಂತ್ರಿಕ ಸುಳಿವು ಆಧರಿಸಿ ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಆರೋಪಿಯನ್ನು ಬಂಧಿಸಿ, ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸುಲಭವಾಗಿ ಹಣ ಗಳಿಸಲು ಅಪಹರಣ

ಆರೋಪಿ ಜಸ್ಮುದ್ದೀನ್‌ ಶೇಕ್‌ ಜಾರ್ಖಂಡ್‌ ರಾಜ್ಯದ ರಾಂಚಿ ಮೂಲದವನು. ಹೋಟೆಲ್‌ ಮಾನ್ಮೇಜ್‌ಮೆಂಟ್‌ ಕೋರ್ಸ್‌ ಮುಗಿಸಿರುವ ಈತ ಕಳೆದ 9 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ಪ್ರಗತಿನಗರದಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಫ್ಲ್ಯಾಟ್‌ ಬಾಡಿಗೆ ಪಡೆದು ಒಬ್ಬನೇ ವಾಸವಿದ್ದ. ಕ್ಲೌಡ್‌ ಕಿಚನ್‌ ಎಂಬ ಬಿಜಿನೆಸ್‌ ಆರಂಭಿಸಿದ್ದ ಆರೋಪಿಯು ಆನ್‌ಲೈನ್‌ನಲ್ಲಿ ಆರ್ಡರ್‌ ಪಡೆದು ಮನೆಯಲ್ಲಿ ಅಡುಗೆ ತಯಾರಿಸಿ ಮಾರಾಟ ಮಾಡುತ್ತಿದ್ದ. ಆದರೆ, ಈ ವ್ಯವಹಾರ ನಿರೀಕ್ಷಿತ ಮಟ್ಟದಲ್ಲಿ ಕೈ ಹಿಡಿದಿರಲಿಲ್ಲ. ಹೀಗಾಗಿ ಸುಲಭವಾಗಿ ಹಣ ಸಂಪಾದಿಸುವ ಸಲುವಾಗಿ ಬಾಲಕರ ಅಪಹರಣಕ್ಕೆ ಪ್ಲಾನ್‌ ಮಾಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಅಪಹರಣಕ್ಕೆ 2 ತಿಂಗಳು ಪ್ಲಾನ್‌

ಆರೋಪಿ ಜಸ್ಮುದ್ದೀನ್‌ ಶೇಕ್‌, ಗೃಹಬಳಕೆ ವಸ್ತುಗಳ ಮಳಿಗೆ ಮಾಲೀಕ ನರೇಶ್‌ ಅವರ ಪುತ್ರ ಸೂರಜ್‌ನನ್ನು ಅಪಹರಿಸಲು ಕಳೆದ ಎರಡು ತಿಂಗಳಿಂದ ಸಂಚು ರೂಪಿಸಿದ್ದ. ಮಳಿಗೆ ಬಳಿ ಬಾಲಕನ ಚಲನವನದ ಮೇಲೆ ನಿಗಾವಹಿಸಿದ್ದ. ಅದರಂತೆ ಮಂಗಳವಾರ ಸಂಜೆ ಮಳಿಗೆ ಬಳಿ ಆಟವಾಡುತ್ತಿದ್ದ ಮೂವರು ಬಾಲಕರನ್ನೂ ಆರೋಪಿ ಕೇಕ್‌ ಕೊಡುವುದಾಗಿ ಕರೆದಿದ್ದಾನೆ. ಆದರೆ, ಸೂರಜ್‌ ಮಾತ್ರ ಆತನೊಂದಿಗೆ ತೆರಳಿದ್ದ. ಹೀಗಾಗಿ ಆತನನ್ನು ಮಾತ್ರ ಅಪಹರಣ ಮಾಡಿದ್ದ. ಒಂದು ವೇಳೆ ಉಳಿದ ಇಬ್ಬರು ಬಾಲಕರು ಬಂದಿದ್ದರೂ ಅವರನ್ನೂ ಅಪಹರಣ ಮಾಡಿ ಅವರ ಪೋಷಕರಿಗೆ ಹಣಕ್ಕೆ ಬೇಡಿಕೆ ಇರಿಸಲು ಯೋಚಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಫ್ಲ್ಯಾಟ್‌ನಲ್ಲೇ ಸಿಕ್ಕಿಬಿದ್ದ!

ಆರೋಪಿ ಜಸ್ಮುದ್ದೀನ್‌ ಶೇಕ್‌ ಪ್ರಗತಿನಗರದ ಫ್ಲ್ಯಾಟ್‌ನಲ್ಲೇ ಸೂರಜ್‌ನನ್ನು ಇರಿಸಿಕೊಂಡಿದ್ದ. ಸೂರಜ್‌ಗೆ ಒಂದು ಡಬ್ಬಿ ಚಾಕೋಲೆಟ್‌ ಸೇರಿದಂತೆ ಹಲವು ತಿನಿಸುಗಳನ್ನು ಕೊಡಿಸಿದ್ದ. ಹೀಗಾಗಿ ಸೂರಜ್‌ ಸಹ ಯಾವುದಕ್ಕೂ ಹಠ ಮಾಡದೆ ಆರಾಮವಾಗಿ ಆರೋಪಿಗೆ ಜತೆಗಿದ್ದ. ಈ ನಡುವೆ ಪೊಲೀಸರು ಜಾಡು ಹಿಡಿದು ನೇರ ಫ್ಲ್ಯಾಟ್‌ಗೆ ತೆರಳಿ ಆರೋಪಿಯನ್ನು ಬಂಧಿಸಿ, ಬಾಲಕನನ್ನು ರಕ್ಷಿಸಿದ್ದಾರೆ.