ವೇಗದ ಚಾಲನೆಗೆ ಕಾರ್ಮಿಕ ಬಲಿ

| Published : Jul 16 2024, 01:33 AM IST / Updated: Jul 16 2024, 05:08 AM IST

ಸಾರಾಂಶ

ಮಿನಿ ಬಸ್‌, ರಸ್ತೆ ಬದಿ ನಿಲುಗಡೆ ಮಾಡಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನೌಕರ ಮೃತಪಟ್ಟಿದ್ದಾನೆ.

  ಬೆಂಗಳೂರು :  ಕಾರ್ಖಾನೆಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್‌, ರಸ್ತೆ ಬದಿ ನಿಲುಗಡೆ ಮಾಡಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನೌಕರ ಮೃತಪಟ್ಟು, ಐವರು ನೌಕರರು ಗಾಯಗೊಂಡಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕುಣಿಗಲ್‌ನ ದೇವರಾಜ್‌(41) ಮೃತ ನೌಕರ. ಐವರು ನೌಕರರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಬೆಳಗ್ಗೆ 8.50ಕ್ಕೆ ನೈಸ್‌ ರಸ್ತೆಯ ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಬಳಿ ಈ ಘಟನೆ ನಡೆದಿದೆ.

ಬೊಮ್ಮಸಂದ್ರದ ಖಾಸಗಿ ಕಾರ್ಖಾನೆಯಲ್ಲಿ ದೇವರಾಜ್‌ ಕೆಲಸ ಮಾಡುತ್ತಿದ್ದರು. ಪ್ರತಿ ದಿನ ಕುಣಿಗಲ್‌ನಿಂದ ಕೆಲಸಕ್ಕೆ ಬಂದು ಹೋಗುತ್ತಿದ್ದರು. ಅದರಂತೆ ಬೆಳಗ್ಗೆ ಕಾರ್ಖಾನೆಯ ಮಿನಿ ಬಸ್‌ 30 ಮಂದಿ ನೌಕರರನ್ನು ಕರೆದುಕೊಂಡು ನೈಸ್‌ ರಸ್ತೆ ಮುಖಾಂತರ ಬೊಮ್ಮಸಂದ್ರದತ್ತ ಹೊರಟ್ಟಿತ್ತು. ಈ ಮಿನಿ ಬಸ್‌ನಲ್ಲಿ ದೇವರಾಜ್‌ ಸಹ ಇದ್ದರು.

ನಿಂತಿದ್ದ ಲಾರಿಗೆ ಹಿಂದಿನ ಡಿಕ್ಕಿ:

ಎಲೆಕ್ಟ್ರಾನಿಕ್‌ ಸಿಟಿ ಟೋಲ್ ಬಳಿ ಚಾಲಕ ವೇಗವಾಗಿ ಮಿನಿ ಬಸ್‌ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲುಗಡೆ ಮಾಡಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಯಾಗಿದೆ. ಡಿಕ್ಕಿಯ ರಭಸಕ್ಕೆ ಮಿನಿ ಬಸ್‌ನಲ್ಲಿದ್ದ ದೇವರಾಜು ಸೇರಿ ಆರು ಮಂದಿ ನೌಕರರು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ದೇವರಾಜ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಘಟನೆ ಸುದ್ದಿ ತಿಳಿದು ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಕಾರ್ಖಾನೆಯ ಮಿನಿ ಬಸ್‌ ವೇಗದ ಚಾಲನೆ ಮತ್ತು ಯಾವುದೇ ಸಿಗ್ನಲ್‌ ಹಾಕದೆ ರಸ್ತೆ ಬದಿ ಲಾರಿ ನಿಲುಗಡೆ ಮಾಡಿದ್ದು ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.