ಸಾರಾಂಶ
ಮದ್ದೂರು : ಟ್ರ್ಯಾಕ್ಟರ್ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ಸೋಮನಹಳ್ಳಿ ಬಳಿ ಶುಕ್ರವಾರ ಸಂಜೆ ಜರುಗಿದೆ.
ತಾಲೂಕಿನ ಕೊಪ್ಪ ಹೋಬಳಿ ಗುಡಿಗೆರೆ ಗ್ರಾಮದ ಲೇ.ಪುಟ್ಟರಾಜು ಪುತ್ರ ಕಿರಣ್ ಕುಮಾರ್ (31) ಮೃತ ಕಾರ್ಮಿಕ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾನೆ.
ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದಕ್ಕೆ ಟ್ರ್ಯಾಕ್ಟರ್‌ನಲ್ಲಿ ಸೌದೆ ಸರಬರಾಜು ಮಾಡಿದ ನಂತರ ವಾಪಸ್ ಬರುವಾಗ ಬೆಂಗಳೂರು- ಮೈಸೂರು ಹಳೇ ರಸ್ತೆಯ ಕೆಸ್ತೂರು ಕ್ರಾಸ್ ಬಳಿ ಟ್ರೈಲರ್‌ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಕಿರಣ್ ಕುಮಾರ್ ಆಯತಪ್ಪಿ ಬಿದ್ದು ಈ ಘಟನೆ ಸಂಭವಿಸಿದೆ.
ಅಪಘಾತದ ನಂತರ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗದ್ದೆಗೆ ಉರುಳಿದ ಬಸ್: 25ಕ್ಕೂಹೆಚ್ಚು ಮಂದಿಗೆ ಗಾಯ
ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಬದಿಯ ಗದ್ದೆಗೆ ಉರುಳಿದ ಪರಿಣಾಮ 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಶಿವಳ್ಳಿ-ಹಾಡ್ಯ ಗ್ರಾಮದ ಮಧ್ಯೆ ನಡೆದಿದೆ.
ಮಂಡ್ಯದಿಂದ ಶಿವಳ್ಳಿ ಮಾರ್ಗವಾಗಿ ಪಾಂಡವಪುರಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್, ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ. ಘಟನೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.