ಜಗಳ ತೆಗೆದು ಸೀಮೆ ಎಣ್ಣೆ ಸುರಿದು ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ, 2 ಲಕ್ಷ ರು. ದಂಡ

| Published : Oct 01 2024, 01:18 AM IST / Updated: Oct 01 2024, 04:44 AM IST

ಸಾರಾಂಶ

ಮಂಡ್ಯದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಘಟನೆ 2020ರಲ್ಲಿ ನಡೆದಿದ್ದು, ಆರೋಪಿ ಪತಿ ತನ್ನ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

  ಮಂಡ್ಯ : ಕೌಟುಂಬಿಕ ವಿಚಾರವಾಗಿ ಜಗಳ ತೆಗೆದು ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪತಿಗೆ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ, 2 ಲಕ್ಷ ರು. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಸ್ವಾಮಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಮಹದೇವಸ್ವಾಮಿ ಗೀತಾ ಅವರನ್ನು 2006ರ ಜೂ.19 ರಂದು ಮದುವೆಯಾಗಿದ್ದನು. ನಂತರ ಪತ್ನಿ ಜೊತೆ ಸಂಸಾರದಲ್ಲಿ ಸಣ್ಣ-ಪುಟ್ಟ ಮಾತಿಗೂ ಆಗಾಗ್ಗೆ ಜಗಳ ಮಾಡುತ್ತಾ ಗೀತಾಗೆ ಬಾಯಿಗೆ ಬಂದಂತೆ ಬೈಯುತ್ತಾ, ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದನು.

ಕಳೆದ 2020ರ ಫೆ.21ರ ರಾತ್ರಿ 9 ಗಂಟೆ ಸಮಯದಲ್ಲಿ ತನ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಔಟ್‌ ಹೌಸ್‌ನ ಒಳಭಾಗದ ಸ್ನಾನದ ಮನೆಗೆ ಗೀತಾ ಹೋದಾಗ ಆರೋಪಿಯು ತನ್ನ ಗೀತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಅಲ್ಲೇ ಕ್ಯಾನ್‌ನಲ್ಲಿದ್ದ ಸೀಮೆಎಣ್ಣೆಯನ್ನು ತೆಗೆದುಕೊಂಡು ಗೀತಾಳ ತಲೆ ಮತ್ತು ಮೈ ಮೇಲೆ ಸುರಿದು ಬೆಂಕಿ ಹಚ್ಚಿದ್ದನು.

ಇದರಿಂದ ಗೀತಾಳ ಮೈ ಮೇಲೆ ಸುಟ್ಟಗಾಯಗಳಾಗಿದ್ದು, ಗೀತಾಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಪ್ರಕರಣದ ಬಗ್ಗೆ ತನಿಖಾಧಿಕಾರಿ ಧನರಾಜ್ ಡಿ.ಪಿ. (ಸಿ.ಪಿ.ಐ) ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ನಂತರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯ್ಯುದು ನಿಶಾ ಅವರು ಆರೋಪಿ ಮಹದೇವಸ್ವಾಮಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ದಂಡ ವಿಧಿಸಿ, ದಂಡವನ್ನು ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಶಿಕ್ಷೆಯನ್ನು ಹಾಗೂ ಭಾದಂಸಂ ಕಲಂ.498(ಎ) ರ ಅಡಿ ಅಪರಾಧಕ್ಕೆ 2 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ 50,000 ರು .ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಎನ್.ಟಿ.ವಿಜಯಲಕ್ಷ್ಮಿ ವಾದ ಮಂಡಿಸಿದ್ದರು.