ತನ್ನ ಪತ್ನಿ ಗಾನವಿ ಆತ್ಮಹತ್ಯೆಗೆ ಕಾರಣನಾದ ಆರೋಪದಿಂದ ಮನನೊಂದು ಮಹಾರಾಷ್ಟ್ರದ ನಾಗ್ಪುರದ ಹೋಟೆಲ್‌ನಲ್ಲಿ ನವ ವಿವಾಹಿತ ಸೂರಜ್ (32) ಕೂಡ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಪತ್ನಿ ಗಾನವಿ ಆತ್ಮಹತ್ಯೆಗೆ ಕಾರಣನಾದ ಆರೋಪದಿಂದ ಮನನೊಂದು ಮಹಾರಾಷ್ಟ್ರದ ನಾಗ್ಪುರದ ಹೋಟೆಲ್‌ನಲ್ಲಿ ನವ ವಿವಾಹಿತ ಸೂರಜ್ (32) ಕೂಡ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ವಿದ್ಯಾರಣ್ಯಪುರ ಸಮೀಪದ ಬಿಇಎಲ್ ಲೇಔಟ್‌ ನಿವಾಸಿ ಸೂರಜ್ (32) ಮೃತಪಟ್ಟಿದ್ದು, ತನ್ನ ಪತ್ನಿ ಸಾವಿನ ಬಳಿಕ ಕೇಳಿ ಬಂದ ವೈಯಕ್ತಿಕ ನಿಂದನೆಗಳಿಂದ ಮರ್ಯಾದೆಗೆ ಅಂಜಿ ನಾಗ್ಪುರದ ಹೋಟೆಲ್‌ನಲ್ಲಿ ಶುಕ್ರವಾರ ರಾತ್ರಿ ಸೂರಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ದಿನಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸೂರಜ್ ಪತ್ನಿ ಗಾನವಿ (24) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಸಂಬಂಧ ಸೂರಜ್, ಆತನ ತಾಯಿ ಜಯಂತಿ ಹಾಗೂ ಅಣ್ಣ ಸಂಜಯ್‌ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ದೌರ್ಜನ್ಯ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಮೃತ ಸೂರಜ್ ಹಾಗೂ ಆತನ ಕುಟುಂಬದವರಿಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಈ ನಡುವೆ ತಮ್ಮ ಮಗಳು ಗಾನವಿಗೆ ಸಾವಿಗೆ ಸೂರಜ್‌ ನಲ್ಲಿದ್ದ ವೈಯಕ್ತಿಕ ಸಮಸ್ಯೆ ಕಾರಣವಾಗಿದೆ ಎಂದು ಆಕೆಯ ಸಂಬಂಧಿಕರು ದೂರಿದ್ದರು. ಈ ಬೆಳವಣಿಗೆಯಿಂದ ಬೇಸತ್ತು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ತಾಯಿ ಸಹ ಆತ್ಮಹತ್ಯೆ ಯತ್ನ?ಮಹಾರಾಷ್ಟ್ರ ನಾಗ್ಪುರದಲ್ಲಿ ಸೂರಜ್ ಸಾವಿನಿಂದ ಆಘಾತಗೊಂಡು ಆತನ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಮಮೂರ್ತಿ ನಗರ ಠಾಣೆ ಪೊಲೀಸು ಖಚಿತಪಡಿಸಿದ್ದಾರೆ. ತಾಯಿ ತಪ್ಪಿಗೆ ಮಗ ಬಲಿ: ಗಾನವಿ ತಾಯಿ ಆಕ್ರೋಶ

ಹಣಕ್ಕಾಗಿ ಸೂರಜ್ ತಾಯಿಯ ವ್ಯಾಮೋಹ ಹಾಗೂ ಧನ ಪಿಶಾಚಿತನಕ್ಕೆ ಇಬ್ಬರು ಮಕ್ಕಳು ಬಲಿಯಾದರು ಎಂದು ಮೃತ ಗಾನವಿ ತಾಯಿ ರುಕ್ಮಿಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆತ್ತ ಮಗಳನ್ನು ಕಳೆದುಕೊಂಡು ತಾಯಿ ವೇದನೆ ಏನೆಂಬುದು ಸೂರಜ್ ತಾಯಿ ಸಹ ಅನುಭವಿಸಬೇಕು. ನಮ್ಮ ಮಗಳ ಆತ್ಮಹತ್ಯೆಗೆ ಸೂರಜ್ ಹಾಗೂ ಆತನ ಕುಟುಂಬದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುವಂತೆ ಒತ್ತಾಯಿಸಿದ್ದೆವು. ಆದರೆ ಆತ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆರೋಪಿಸಿದ್ದಾರೆ.

ನಮ್ಮ ಮಗಳ (ಗಾನವಿ) ನಡವಳಿಕೆ ಬಗ್ಗೆ ಒಂದು ಕಪ್ಪು ಚುಕ್ಕಿ ಇರಲಿಲ್ಲ. ಹಾಗೇನಾದರೂ ತಪ್ಪು ಕಂಡು ಬಂದಿದ್ದರೆ ಪೊಲೀಸರಿಗೆ ದೂರ ಕೊಡಬೇಕಿತ್ತು. ಸೂರಜ್ ನನ್ನು ಆತನ ತಾಯಿ ದಾರಿ ತಪ್ಪಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.