ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಜಾರಿ ಅಧಿಕಾರಿ ಕಚೇರಿ ಹಾಗೂ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳೂ ಸೇರಿದಂತೆ ಒಟ್ಟು ೯ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸುವ ಮೂಲಕ ಕಡತಗಳು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆಮಂಡ್ಯಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಜಾರಿ ಅಧಿಕಾರಿ ಕಚೇರಿ ಹಾಗೂ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳೂ ಸೇರಿದಂತೆ ಒಟ್ಟು ೯ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸುವ ಮೂಲಕ ಕಡತಗಳು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್ ಸೌಲಭ್ಯ ಸಿಗದಿರುವುದು, ಉದ್ದೇಶಪೂರ್ವಕವಾಗಿ ಸ್ಕ್ಯಾನಿಂಗ್‌ಗಾಗಿ ಖಾಸಗಿ ಆಸ್ಪತ್ರೆಗಳಿಗೆ, ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಶಿಫಾರಸು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ದಿಢೀರ್ ದಾಳಿಯಿಂದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಆತಂಕಗೊಂಡಿದ್ದರು.ಹೆಣ್ಣು ಭ್ರೂಣ ಹತ್ಯೆಗೆ ಮಂಡ್ಯ ಹಿಂದೊಮ್ಮೆ ಹೆಸರಾಗಿತ್ತು. ಇತ್ತೀಚಿನ ದಿನಗಳಲ್ಲಿ ಲಿಂಗಪತ್ತೆ, ಭ್ರೂಣಹತ್ಯೆಯಂತಹ ಪ್ರಕರಣಗಳು ನಿಯಂತ್ರಣದಲ್ಲಿದೆ. ಆದರೂ ಒಳಗೊಳಗೇ ನಿಗೂಢವಾಗಿ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಕೇಳಿಬರುತ್ತಿದ್ದ ದೂರು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳದೆ ಸ್ಕ್ಯಾನಿಂಗ್ ಯಂತ್ರಗಳನ್ನು ನಿರುಪಯುಕ್ತಗೊಳಿಸಿರುವುದು, ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಕಳುಹಿಸುತ್ತಿರುವ ಬಗ್ಗೆ ಹಲವರಿಂದ ದೂರು ಕೇಳಿಬಂದಿದ್ದವು ಎನ್ನಲಾಗಿದೆ.ಆ ಹಿನ್ನೆಲೆಯಲ್ಲಿ ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳ ಲೋಕಾಯುಕ್ತ ಪೊಲೀಸರು ಒಂಬತ್ತು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ-ಕಡತಗಳ ಪರಿಶೀಲನೆ ನಡೆಸಿದರು.ರಾಜ್ಯಸರ್ಕಾರ ಗರ್ಭಿಣಿ ಸ್ತ್ರೀಯರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ೨೦ ಲಕ್ಷ ರು. ವೆಚ್ಚದಲ್ಲಿ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಸ್ಕ್ಯಾನಿಂಗ್ ಯಂತ್ರಗಳನ್ನು ನೀಡಿದೆ. ಆದರೆ, ಹೀಗೆ ಸ್ಕ್ಯಾನಿಂಗ್ ಸೌಲಭ್ಯವಿರುವ ತಾಲೂಕು ಆಸ್ಪತ್ರೆಗಳಲ್ಲಿ ಎಷ್ಟು ಕಡೆ ತಂತ್ರಜ್ಞರು ಇಲ್ಲ, ಎಲ್ಲೆಲ್ಲಿ ಸ್ಕ್ಯಾನಿಂಗ್ ಯಂತ್ರಗಳಿಗೆ ರೇಡಿಯಾಲಜಿಸ್ಟ್, ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಬಳಕೆಯಾಗದೆ ಉಳಿದಿರುವ ಯಂತ್ರಗಳೆಷ್ಟು, ಎಷ್ಟು ಸ್ಕ್ಯಾನಿಂಗ್ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ ಎಂಬ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಸ್ಕ್ಯಾನಿಂಗ್ ಯಂತ್ರಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ಕಾರಣ ಕೋಟ್ಯಂತರ ರು. ವೆಚ್ಚದ ಸ್ಕ್ಯಾನಿಂಗ್ ಯಂತ್ರಗಳು ಹಾಳಾಗುತ್ತಿವೆ. ಇನ್ನು ಕೆಲವು ಆಸ್ಪತ್ರೆಗಳಲ್ಲಿ ಹಲವು ತಿಂಗಳಿಂದ ಸ್ಕ್ಯಾನಿಂಗ್ ಯಂತ್ರ ಕೆಟ್ಟುಹೋಗಿದ್ದರೂ ರಿಪೇರಿ ಮಾಡಿಸದೆ ಗರ್ಭಿಣಿ ಸ್ತ್ರೀಯರಿಗೆ ಸೌಲಭ್ಯ ಸಿಗದಂತೆ ಮಾಡಿರುವ ಬಗ್ಗೆಯೂ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೂ ಶಿಫಾರಸು ಮಾಡಿರುವುದೂ ಕಂಡುಬಂದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.ಸರ್ಕಾರಿ ಆಸ್ಪತ್ರೆ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಲಿಂಗಪತ್ತೆ, ಭ್ರೂಣ ಹತ್ಯೆಯಂತಹ ಪ್ರಕರಣಗಳಿಗೆ ಕಾರಣವಾಗುತ್ತಿರಬಹುದೇ ಎಂಬ ಸಂಶಯದ ಮೇರೆಗೆ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿ ಯಾವ ಯಾವ ಆಸ್ಪತ್ರೆಗಳಲ್ಲಿ ಎಷ್ಟು ಗರ್ಭಿಣಿಯರನ್ನು ಸ್ಕ್ಯಾನಿಂಗ್ ಮಾಡಲಾಗಿದೆ, ಒಟ್ಟಾರೆ ಸ್ಕ್ಯಾನಿಂಗ್‌ಗೆ ಬಂದ ಪ್ರಕರಣಗಳೆಷ್ಟು, ಶಿಫಾರಸು ಮಾಡಲಾದ ಪ್ರಕರಣಗಳೆಷ್ಟು, ಅದರಲ್ಲಿ 18 ವರ್ಷ ವಯಸ್ಸಿನ ಕೆಳಗಿನ ಗರ್ಭಿಣಿಯರು ಎಷ್ಟು ಮಂದಿ ಇದ್ದಾರೆ, ಎಷ್ಟು ಸಂಖ್ಯೆಯ ಸ್ಕ್ಯಾನಿಂಗ್ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ, ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಶಿಫಾರಸು ಮಾಡಲಾಗಿದೆ. ಡಯಾಗ್ನೋಸ್ಟಿಕ್ ಸೆಂಟರ್‌ನವರು ಮಾಡಿರುವ ಸ್ಕ್ಯಾನಿಂಗ್‌ಗಳೆಷ್ಟು ಎಂಬೆಲ್ಲಾ ವಿವರಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು. ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಸ್ಕ್ಯಾನಿಂಗ್ ಬಗ್ಗೆ ದಾಖಲಾಗಿರುವ ಮಾಹಿತಿ, ಜಿಲ್ಲಾ ಜಾರಿ ಅಧಿಕಾರಿ ಕಚೇರಿಗೆ ನೀಡಿರುವ ವರದಿಗಳ ಬಗ್ಗೆ ಮಾಹಿತಿ ಪಡೆದು, ಪರಿಶೀಲನೆ ನಡೆಸಿದರು. ವರದಿಯಲ್ಲಿ ವ್ಯತ್ಯಾಸ ಇರುವ ಅಧಿಕಾರಿ, ಸಿಬ್ಬಂದಿಯ ವಿಚಾರಣೆಯನ್ನೂ ನಡೆಸಿದ್ದಾರೆ. ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಸುನಿಲ್‌ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಸೇರಿದಂತೆ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.