ಹಾಸನ ಎಂಪಿ ವಿರುದ್ಧ ಲುಕೌಟ್‌ ನೋಟಿಸ್‌

| Published : May 03 2024, 01:30 AM IST / Updated: May 03 2024, 06:14 AM IST

prajwal revanna

ಸಾರಾಂಶ

ಲೈಂಗಿಕ ಹಗರಣದಲ್ಲಿ ವಿಚಾರಣೆಗೆ ಗೈರಾದ ಬೆನ್ನಲ್ಲೇ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ದಳ (ಎಸ್‌ಐಟಿ) ಗುರುವಾರ ಲುಕ್‌ ಔಟ್ ನೋಟಿಸ್‌ ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೈಂಗಿಕ ಹಗರಣದಲ್ಲಿ ವಿಚಾರಣೆಗೆ ಗೈರಾದ ಬೆನ್ನಲ್ಲೇ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ದಳ (ಎಸ್‌ಐಟಿ) ಗುರುವಾರ ಲುಕ್‌ ಔಟ್ ನೋಟಿಸ್‌ ಜಾರಿಗೊಳಿಸಿದೆ.

ಇದರೊಂದಿಗೆ ಪ್ರಜ್ವಲ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ವಿದೇಶದಿಂದ ಮರಳಿದ ತಕ್ಷಣವೇ ಅವರನ್ನು ವಶಕ್ಕೆ ಪಡೆಯುವಂತೆ ದೇಶದ ಎಲ್ಲ ವಿಮಾನ ನಿಲ್ದಾಣಗಳ ವಲಸೆ ವಿಭಾಗದ ಅಧಿಕಾರಿಗಳಿಗೆ ಎಸ್ಐಟಿ ಮನವಿ ಮಾಡಿದೆ.

ಲೈಂಗಿಕ ಹಗರಣ ಬೆಳಕಿಗೆ ಬಂದ ಬಳಿಕ ವಿದೇಶಕ್ಕೆ ಹಾರಿರುವ ಪ್ರಜ್ವಲ್‌ ಅವರಿಗೆ 24 ತಾಸಿನೊಳಗೆ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೋರಿ ತಮ್ಮ ವಕೀಲರ ಮೂಲಕ ಎಸ್‌ಐಟಿಗೆ ಪ್ರಜ್ವಲ್ ಮನವಿ ಮಾಡಿದ್ದರು. ಈ ಕೋರಿಕೆಯನ್ನು ತಿರಸ್ಕರಿಸಿರುವ ಎಸ್‌ಐಟಿ, ಈಗ ವಿದೇಶದಲ್ಲಿರುವ ಸಂಸದರಿಗೆ ಬಿಸಿ ಮುಟ್ಟಿಸಿದ್ದಾರೆ.

ಲೈಂಗಿಕ ಹಗರಣದಲ್ಲಿ ತಪ್ಪಿಸಿಕೊಂಡಿರುವ ಆರೋಪಿ ಎಂದು ಅವರ ವಿರುದ್ಧ ಲುಕ್‌ ಔಟ್‌ ನೋಟಿಸ್ ಜಾರಿಗೊಳಿಸಿರುವ ಎಸ್‌ಐಟಿ, ಸ್ವದೇಶಕ್ಕೆ ಮರಳಿದ ತಕ್ಷಣವೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಮುಂದಾಗಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳ ವಲಸೆ ವಿಭಾಗದ ಅಧಿಕಾರಿಗಳಿಗೆ ಲುಕ್‌ ಔಟ್‌ ಕಳುಹಿಸಿರುವ ಎಸ್‌ಐಟಿ, ವಿದೇಶದಿಂದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆಯುವಂತೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.

ವಾರೆಂಟ್‌ ಜಾರಿಗೆ ಮನವಿ ಸಾಧ್ಯತೆ

ಬೆಂಗಳೂರು: ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಗೊಳಿಸಲು ಮುಂದಾಗಿರುವ ಎಸ್‌ಐಟಿ, ಈಗ ಎರಡನೇ ಹಂತದಲ್ಲಿ ಆರೋಪಿ ವಿರುದ್ಧ ಬಂಧನದ ವಾರಂಟ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ.

ಲೈಂಗಿಕ ಹಗರಣದ ಇದುವರೆಗೆ ತನಿಖೆಯಲ್ಲಿ ಲಭ್ಯವಾಗಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿ, ತಪ್ಪಿಸಿಕೊಂಡಿರುವ ಆರೋಪಿ ಪತ್ತೆಗಾಗಿ ವಾರೆಂಟ್ ಜಾರಿ ಮಾಡುವಂತೆ ಎಸ್‌ಐಟಿ ಕೋರಿಕೆ ಸಲ್ಲಿಸಬಹುದು. ಆಗ ನ್ಯಾಯಾಲಯವು ವಾರೆಂಟ್‌ಗೆ ಸಮ್ಮತಿಸಿದರೆ ಬಳಿಕ ಪ್ರಜ್ವಲ್ ವಿರುದ್ಧ ರೆಡ್ ಕಾರ್ನರ್‌ ನೋಟಿಸ್ ಜಾರಿಗೆ ಎಸ್‌ಐಟಿ ಮುಂದಾಗಲಿದೆ ಎನ್ನಲಾಗಿದೆ.