ಕನ್ನಡಪ್ರಭ ವಾರ್ತೆ ಮದ್ದೂರು
ಮೂರು ಟೆಂಪೋಗಳಲ್ಲಿ ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ರಕ್ಷಣೆ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಪಟ್ಟಣದ ಹೊರ ವಲಯದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಜರುಗಿದೆ.ಘಟನೆಗೆ ಸಂಬಂಧಿಸಿದಂತೆ ಮೈಸೂರು ಕೆ.ಆರ್.ನಗರ ಮೂಲದ ಸುದೀಪ್ (22), ದರ್ಶನ್ (21), ಪ್ರಜ್ವಲ್ (22), ಸುಮಂತ್ (25) ಹಾಗೂ ದೇವರಾಜು (29) ಬಂಧಿತ ಆರೋಪಿಗಳು.
ಮೈಸೂರು ಜಿಲ್ಲೆ ಕೆ.ಆರ್.ನಗರದಿಂದ ಮೂರು ಟೆಂಪೋಗಳಲ್ಲಿ ರಾಮನಗರದ ಕಸಾಯಿ ಖಾನೆಗೆ ಗೋವುಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತರಾದ ಕೆ.ಟಿ.ನವೀನ್ ನೇತೃತ್ವದಲ್ಲಿ ತೇಜಸ್, ಗಿರೀಶ್, ದಿನೇಶ್, ಎಂ.ಜೆ.ಅನಿಲ್ ಕುಮಾರ್, ಶ್ರೇಯಸ್, ಗುರು ಮಲ್ಲೇಶ ಸೇರಿದಂತೆಸುಮಾರು 40 ಮಂದಿ ಕಾರ್ಯಕರ್ತರ ತಂಡ ಗೆಜ್ಜಲಗೆರೆ ಸಮೀಪದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಟಿಪಾನೀಸ್ ಹೋಟೆಲ್ ಬಳಿಯ ಡಾಲ್ಫಿನ್ ಬೇಕರಿ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಟೆಂಪೋಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಗೋವು ಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿದೆ.ನಂತರ ಕಾರ್ಯಕರ್ತರು ಆರೋಪಿಗಳ ಸಹಿತ ವಾಹನ ಹಾಗೂ ಗೋವುಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಮದ್ದೂರು ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಗೋ ಹತ್ಯೆ ಪ್ರತಿಬಂದಕ ಮತ್ತು ರಕ್ಷಣಾ ಕಾಯ್ದೆಶ ಅನ್ವಯ ಪ್ರಕರಣ ದಾಖಲು ಮಾಡಿ ಕೊಂಡು ತನಿಖೆ ಕೈಗೊಂಡಿದ್ದಾರೆ. ವಶಪಡಿಸಿಕೊಂಡ ಗೋವುಗಳನ್ನು ತಾಲೂಕು ನಿಡಘಟ್ಟ ಸಮೀಪದ ಗೋಶಾಲೆವಶಕ್ಕೆ ನೀಡಲಾಗಿದೆ.