ದರ್ಶನ್‌ಗೆ ಸದ್ಯಕ್ಕಿಲ್ಲ ಮನೆ ಊಟ : ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ

| Published : Jul 20 2024, 12:57 AM IST / Updated: Jul 20 2024, 05:11 AM IST

ದರ್ಶನ್‌ಗೆ ಸದ್ಯಕ್ಕಿಲ್ಲ ಮನೆ ಊಟ : ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯಿಂದ ಊಟ ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ತನಗೆ ಅನುಮತಿಸಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ಸೂಚಿಸಬೇಕು ಎಂದು ಕೋರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ನಟ ದರ್ಶನ್‌ಗೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

 ಬೆಂಗಳೂರು : ಮನೆಯಿಂದ ಊಟ ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ತನಗೆ ಅನುಮತಿಸಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ಸೂಚಿಸಬೇಕು ಎಂದು ಕೋರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. 

ದರ್ಶನ್‌ ಸಲ್ಲಿಸಿರುವ ಹೈಕೋರ್ಟ್‌ಗೆ ಸಲ್ಲಿಸಿರುವ ತಕರಾರು ಅರ್ಜಿಯು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.ಕೆಲ ಕಾಲ ದರ್ಶನ್‌ ಮತ್ತು ಸರ್ಕಾರ ಪರ ವಕೀಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಮನವಿ ಕುರಿತಂತೆ ಶನಿವಾರವೇ (ಜು.20) ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. 

ಆ ಕುರಿತಂತೆ ಒಂದು ವಾರದ (ಜು.27) ಒಳಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆ ನಡೆಸಿ ನಿರ್ಧಾರ ಪ್ರಕಟಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜು.29ಕ್ಕೆ ಮುಂದೂಡಿತು.ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್‌ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ, ಕರ್ನಾಟಕ ಬಂಧೀಖಾನೆ ಕಾಯ್ದೆ-1963ರ ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿ ಮನೆ ಊಟ ಮತ್ತು ಇತ್ಯಾದಿ ಸಲವತ್ತು ಪಡೆಯುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಅದರಂತೆ ದರ್ಶನ್‌ ಸಹ ಸವಲತ್ತು ಪಡೆಯಲು ಅರ್ಹರಿದ್ದಾರೆ ಎಂದು ವಾದಿಸಿದರು.

ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಭಾನು ಪ್ರಕಾಶ್‌, ಬೆಂಗಳೂರು ಜೈಲಲ್ಲಿ 5000 ಕೈದಿಗಳು ದಿನವೂ ಊಟ ಮಾಡುತ್ತಿದ್ದಾರೆ. ಬೇರ್‍ಯಾರಿಗೂ ಫುಡ್ ಪಾಯಿಸನ್‌ ಆಗಿಲ್ಲ. ದರ್ಶನ್‌ ಸಹ ಫುಡ್ ಪಾಯಿಸನ್‌ ಆಗಿರುವ ಬಗ್ಗೆ ವೈದ್ಯರಿಗೆ ಹೇಳಿಲ್ಲ ಎಂದು ಆಕ್ಷೇಪಿಸಿದರು.ಅಂತಿಮವಾಗಿ ನ್ಯಾಯಮೂರ್ತಿಗಳು, ಕರ್ನಾಟಕ ಬಂಧೀಖಾನೆ ಕಾಯ್ದೆ-1963ರ ಸೆಕ್ಷನ್ 30ರ ಅಡಿಯಲ್ಲಿ ಮನೆಯಿಂದ ಊಟ ಪಡೆಯಲು ವಿಚಾರಣಾಧೀನ ಕೈದಿಗೆ ಅವಕಾಶವಿದೆ ಎಂದು ಆದೇಶ ನೀಡಿದರೆ, ಅದು ಎಲ್ಲಾ ಕೈದಿಗಳಿಗೆ ಹಕ್ಕು ಆಗಿಬಿಡುತ್ತದೆ. ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ಪಡೆಯುವುದು ಮೂಲಭೂತ ಹಕ್ಕಾಗುತ್ತದೆಯೇ ಎಂಬ ಬಗ್ಗೆ ಕಾನೂನುಗಳ ಪರಾಮರ್ಶೆ ಅಗತ್ಯವಿದೆ. ಸಂಪೂರ್ಣ ವಾದ ಮಂಡನೆ ಆಲಿಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಅದಕ್ಕೆ ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.

ಹೈಕೋರ್ಟ್‌ ಪ್ರಕರಣದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವರೆಗೆ ಪರ್ಯಾಯವಾಗಿ ಅರ್ಜಿದಾರರು ತಮ್ಮ ಮನವಿ ಕುರಿತಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಮುಂದೆಯೇ ಅರ್ಜಿ ಸಲ್ಲಿಸುವುದು ಸೂಕ್ತ. ಅದರಂತೆ ಅವರು ಶನಿವಾರವೇ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಸೋಮವಾರ ಸರ್ಕಾರ ಆಕ್ಷೇಪಣೆ ಸಲ್ಲಿಸಲಿ. ಅರ್ಜಿದಾರರ ಮನವಿ ಕುರಿತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಜುಲೈ 27ರ ಒಳಗೆ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

2022ರ ಕಾರಾಗೃಹ ಕೈಪಿಡಿಯ ಪ್ಯಾರಾ 295ರಲ್ಲಿ ಹೇಳಿರುವಂತೆ ವಿಚಾರಣಾಧೀನ ಕೈದಿ ಮನೆ ಊಟ, ಹಾಸಿಗೆ, ಊಟದ ಪರಿಕರ ಹಾಗೂ ದಿನಪತ್ರಿಕೆ ಪಡೆಯಲು ಅವಕಾಶವಿದೆ.ಹೈಕೋರ್ಟ್‌ ನೀಡುವ ತೀರ್ಪು ಇತರೆ ಕೈದಿಗಳಿಗೆ ಅನ್ವಯವಾಗುತ್ತದೆ. ಹಾಗಾಗಿ, ಪ್ರಕರಣದಲ್ಲಿ ನಾನು ಮಧ್ಯಂತರ ಆದೇಶ ನೀಡುವುದಿಲ್ಲ.