ಸಾರಾಂಶ
ಮಂಡ್ಯ : ಹೋಳಿ ಹಬ್ಬದ ಊಟ ಸೇವಿಸಿ ಮೇಘಾಲಯ ವಿದ್ಯಾರ್ಥಿ ಮೃತಪಟ್ಟ ಮಳವಳ್ಳಿ ತಾಲೂಕಿನ ಕಾಗೇಪುರ ದುರಂತದಲ್ಲಿ ಅಸ್ವಸ್ಥರ ಸಂಖ್ಯೆ 100ಕ್ಕೆ ಏರಿಕೆಯಾಗಿದ್ದು, ಆಹಾರ ತಯಾರಿಸಿದ ಹೋಟೆಲ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಂದ್ ಮಾಡಿಸಲಾಗಿದೆ.
ಪಟ್ಟಣದ ಹೊರವಲಯದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹೋಟೆಲ್‌ನಲ್ಲಿ (ಸಿದ್ದಪ್ಪಾಜಿ ಹೋಟೆಲ್) ಶುಕ್ರವಾರ ಹೋಳಿ ಆಚರಣೆಗಾಗಿ ಉದ್ಯಮಿ ಪುಷ್ಪೇಂದ್ರ ಕುಮಾರ್ 150 ಮಂದಿಗೆ ಊಟ ಬುಕ್ ಮಾಡಿದ್ದರು. ಊಟ ಮಾಡಿದ ಉದ್ಯಮಿಯ 61 ಸಂಬಂಧಿಕರೂ ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಟೆಲ್‌ನಲ್ಲಿ ಊಟ ಖರೀದಿಸಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಅಸ್ವಸ್ಥಗೊಂಡಿದ್ದ ಗೋಕುಲ ವಿದ್ಯಾಸಂಸ್ಥೆಯ 5 ವಿದ್ಯಾರ್ಥಿಗಳು ತೀವ್ರ ನಿಗಾಘಟಕದಲ್ಲಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ವಿಷಾಹಾರ ಕೇಸ್ ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಹೊಟೇಲ್ ಸಮೀಪ ಗದ್ದೆ ಬಳಿ ಬಿಸಾಡಿದ್ದ ಆಹಾರವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.