ಸಾರಾಂಶ
ಬೆಂಗಳೂರು : ಅನುಮತಿ ಇಲ್ಲದೆ ವಿಧಾನಸೌಧ ಕಟ್ಟಡದ ಮೇಲೆ ಡ್ರೋನ್ ಕ್ಯಾಮೆರಾ ಹಾರಿಸುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಉಪ್ಪಾರಹಳ್ಳಿ ನಿವಾಸಿ ವಿನಯ್ (33) ಬಂಧಿತ. ಆರೋಪಿಯಿಂದ ಡ್ರೋನ್ ಕ್ಯಾಮೆರಾ ಹಾಗೂ ರಿಮೋಟ್ ಜಪ್ತಿ ಮಾಡಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಎಚ್.ಎನ್.ಶಿವಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಹೆಡ್ ಕಾನ್ಸ್‌ಟೇಬಲ್ ಶಿವಕುಮಾರ್ ಅವರು ಶುಕ್ರವಾರ ಬೆಳಗ್ಗೆ ಸುಮಾರು 7.30ಕ್ಕೆ ಗಸ್ತು ಕರ್ತವ್ಯದಲ್ಲಿದ್ದರು. ವಿಧಾನಸೌಧದ ಪೂರ್ವ ದ್ವಾರದ ಬಳಿ ಬರುವಾಗ, ಕಟ್ಟಡದ ಮೇಲಿಂದ ಶಬ್ಧ ಕೇಳಿ ಬಂದಿದೆ, ತಕ್ಷಣ ಮುಂದೆ ಹೋಗಿ ನೋಡಿದಾಗ ವಿಧಾನಸೌಧ ಕಟ್ಟಡದ ಮೇಲೆ ಚಿಕ್ಕ ಡ್ರೋನ್ ಹಾರಾಡುತ್ತಿರುವುದು ಕಂಡು ಬಂದಿದೆ.
ಕೊಂಚ ಮುಂದೆ ತೆರಳಿ ಸುತ್ತಮುತ್ತ ಪರಿಶೀಲಿಸಿದಾಗ ಅಂಬೇಡ್ಕರ್ ವೀದಿಯ ಹೈಕೋರ್ಟ್ ಕಡೆ ಇರುವ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಕೈಯಲ್ಲಿ ರಿಮೋಟ್ ಹಿಡಿದುಕೊಂಡು ಡ್ರೋನ್ ಹಾರಾಟ ನಡೆಸುತ್ತಿರುವುದು ಕಂಡು ಬಂದಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ಡ್ರೋನ್ ಕೆಳಗೆ ಇಳಿಸಿ, ಡ್ರೋನ್ ಹಾಗೂ ರಿಮೋಟ್ ಜಪ್ತಿ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಸುಭಾಶ್ಚಂದ್ರ ಅವರ ವಶಕ್ಕೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ವಿನಯ್, ಪ್ರೀ ವೆಡ್ಡಿಂಗ್ ಪ್ರಯುಕ್ತ ತುಮಕೂರಿನಿಂದ ಬೆಂಗಳೂರಿಗೆ ಬಂದು ಡ್ರೋನ್ ಕ್ಯಾಮರಾದಲ್ಲಿ ವಿಧಾನಸೌಧ ಕಟ್ಟಡದ ವಿಡಿಯೋ ಸೆರೆ ಹಿಡಿಯುತ್ತಿದ್ದಾಗಿ ಹೇಳಿಕೆ ನೀಡಿದ್ದಾನೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.