ಕನ್ನಡಪ್ರಭ ವಾರ್ತೆ ಬೆಂಗಳೂರು
ಪೊಕ್ಸೋ ಪ್ರಕರಣ ದಾಖಲಿಸಿದರೂ ಬುದ್ಧಿ ಕಲಿಯದೆ ತಮ್ಮ ಮಗಳಿಗೆ ಕಾಡುತ್ತಿದ್ದ ಸಂಬಂಧಿಯನ್ನು ಕೊಲೆ ಮಾಡಿ ರಾಜಕಾಲುವೆಗೆ ಎಸೆದಿದ್ದ ಯುವತಿಯ ತಂದೆ ಹಾಗೂ ಚಿಕ್ಕಪ್ಪ ಸೇರಿ ನಾಲ್ವರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಚಿಮ್ಮಡ ಗ್ರಾಮದ ಈರಯ್ಯ ದುಂಡಯ್ಯ ಮಠಪತಿ, ಅವರ ಸೋದರ ಚಿನ್ನಯ್ಯ ಹಾಗೂ ಸ್ನೇಹಿತರಾದ ಚೇತನ ಮಾದರ ಮತ್ತು ವಿನಾಯಕ ಗುರುವ ಬಂಧಿತರಾಗಿದ್ದು, ಇತ್ತೀಚಿಗೆ (ಮಾ.28) ಯಲಹಂಕ ಬಳಿ ರಮೇಶ್‌ನನ್ನು (36) ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಹಿಂಸೆ ಸಹಿಸಲಾರದೆ ಹತ್ಯೆ:ಈರಯ್ಯ ಹಾಗೂ ಮೃತ ರಮೇಶ್ ಸೋದರ ಸಂಬಂಧಿಗಳಾಗಿದ್ದರು. ಆದರೆ, ವಾರಿಗೆಯಲ್ಲಿ ಈರಯ್ಯ ಅವರ ಮಗಳಿಗೆ ರಮೇಶ್ ಸೋದರನಾಗಬೇಕಿತ್ತು. ಅಪ್ರಾಪ್ತ ವಯಸ್ಸಿನ ಈರಯ್ಯ ಅವರ ಮಗಳ ಜತೆ ಅನುಚಿತ ವರ್ತನೆ ತೋರಿದ ಆರೋಪ ಮೇರೆಗೆ 2022ರಲ್ಲಿ ಬಾಗಲಕೋಟೆ ಜಿಲ್ಲೆ ಮಧೋಳ ಠಾಣೆಯಲ್ಲಿ ರಮೇಶ್ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ರಮೇಶ್, ಜಾಮೀನು ಪಡೆದು ಹೊರಬಂದು ಮತ್ತೆ ಈರಯ್ಯ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದ. ಆಗ ಮತ್ತೆ ಆತನ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಈರಯ್ಯ ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಬೆಳವಣಿಗೆ ಬಳಿಕ ತಮ್ಮ ಮಗಳನ್ನು ಬೆಂಗಳೂರಿಗೆ ಕರೆತಂದು ಈರಯ್ಯ ಶಿಕ್ಷಣ ಕೊಡಿಸುತ್ತಿದ್ದರು. ಕಳೆದ 15 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ರಮೇಶ್, ಯಲಹಂಕ ಸಮೀಪದ ಅರಳಾಸಂದ್ರದಲ್ಲಿ ನೆಲೆಸಿದ್ದ. ಸ್ವಿಗ್ಗಿ ಡೆಲವರಿ ಬಾಯ್ ಆಗಿ ಆತ ದುಡಿದು ಜೀವನ ಸಾಗಿಸುತ್ತಿದ್ದ. ಇದೇ ವೇಳೆ ಬೆಂಗಳೂರಿನಲ್ಲಿ ತನ್ನ ಸಂಬಂಧಿ ಮಗಳು ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವಿಷಯ ಆತನಿಗೆ ಗೊತ್ತಾಯಿತು. ತರುವಾಯ ಮತ್ತೆ ತನ್ನ ಚಾಳಿ ಶುರು ಮಾಡಿದ್ದ. ಸಂತ್ರಸ್ತೆಯ ಕಾಲೇಜು ಬಳಿ ಹೋಗಿ ಆಕೆಯ ಹಿಂಬಾಲಿಸುವುದಕ್ಕೆ ಆರಂಭಿಸಿದ್ದ. ತನಗೆ ಮತ್ತೆ ರಮೇಶ್ ಕಾಟ ಕೊಡುತ್ತಿರುವ ವಿಷಯವನ್ನು ತಂದೆ ಈರಯ್ಯ ಅವರಿಗೆ ಸಂತ್ರಸ್ತೆ ತಿಳಿಸಿದ್ದಳು ಎಂದು ಹೇಳಲಾಗಿದೆ.
ಸೋದರ, ಸ್ನೇಹಿತರ ಸಾಥ್: ಮಾತುಕತೆ ನೆಪದಲ್ಲಿ ಕೊಲೆ
ತನ್ನ ಮಗಳಿಗೆ ಕಿರುಕುಳ ನೀಡುತ್ತಿರುವ ಸೋದರ ಸಂಬಂಧಿ ರಮೇಶ್ ಹತ್ಯೆಗೆ ಈರಯ್ಯ ನಿರ್ಧರಿಸಿದ್ದ. ಈ ಕೃತ್ಯಕ್ಕೆ ಅವರಿಗೆ ಸೋದರ ಚಿನ್ನಯ್ಯ ಹಾಗೂ ಸ್ನೇಹಿತರು ಸಾಥ್ ಕೊಟ್ಟಿದ್ದಾರೆ. ಅಂತೆಯೇ ಮಾ.27 ರಂದು ರಮೇಶ್‌ನನ್ನು ಮಾತುಕತೆ ನೆಪದಲ್ಲಿ ಕರೆಸಿದ್ದಾರೆ. ಬಳಿಕ ಕಂಠಮಟಾ ಮದ್ಯ ಕುಡಿಸಿದ ಬಳಿಕ ಆತನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಅರಳಾಳಸಂದ್ರ ಸಮೀಪ ರಾಜಕಾಲುವೆ ಬಿಸಾಡಿ ಆರೋಪಿಗಳು ಪರಾರಿಯಾಗಿದ್ದರು. ಮರುದಿನ ರಾಜ ಕಾಲುವೆಯಲ್ಲಿ ಮೃತದೇಹ ಪತ್ತೆಯಾಯಿತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಮೃತನ ಪೂರ್ವಾಪರ ಮಾಹಿತಿ ಕಲೆಹಾಕಿದಾಗ ಹಂತಕರ ಜಾಡು ಸಿಕ್ಕಿತು. ಈ ಸುಳಿವು ಆಧರಿಸಿ ಆರೋಪಿಗಳನ್ನು ಯಲಂಹಕ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.