ಸಾರಾಂಶ
ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಹಗರಣಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯ ಕಿರಿಯ ಸಹೋದರ ನೇಹಲ್ ಮೋದಿಯನ್ನು ಶುಕ್ರವಾರ ಅಮೆರಿಕದಲ್ಲಿ ಬಂಧಿಸಲಾಗಿದೆ.
ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಹಗರಣಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯ ಕಿರಿಯ ಸಹೋದರ ನೇಹಲ್ ಮೋದಿಯನ್ನು ಶುಕ್ರವಾರ ಅಮೆರಿಕದಲ್ಲಿ ಬಂಧಿಸಲಾಗಿದೆ. ಪಿಎನ್‌ಬಿ ಕೇಸಿನ ಪ್ರಮುಖ ಆರೋಪಿಗಳ ಪೈಕಿ ಒಬ್ಬನಾದ ನೇಹಲ್ ವಿರುದ್ಧ ಇಂಟರ್‌ಪೋಲ್ ಹೊರಡಿಸಿದ್ದ ನೋಟಿಸ್ ಅನ್ವಯ ಆತನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ, ಕ್ರಿಮಿನಲ್ ಸಂಚು ಮತ್ತು ಸಾಕ್ಷ್ಯ ನಾಶದ ಆರೋಪಗಳಡಿ ನೇಹಲ್‌ನನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಕೇಂದ್ರ ತನಿಖಾ ದಳ (ಸಿಬಿಐ) ಜಂಟಿಯಾಗಿ ಸಲ್ಲಿಸಿದ ಗಡೀಪಾರು ಕೋರಿಕೆಯ ಆಧಾರದ ಮೇಲೆ ಈ ಬಂಧನ ನಡೆದಿದೆ. ಪ್ರಕರಣವೊಂದರಲ್ಲಿ 3 ವರ್ಷ ಶಿಕ್ಷೆಗೆ ಒಳಗಾಗಿದ್ದ ನೇಹಲ್ ಬಿಡುಗಡೆಯಾದ ಮಾರನೇ ದಿನವೇ ಆತನನ್ನು ಬಂಧಿಸಲಾಗಿದೆ.
ಈ ಪ್ರಕರಣ ಕುರಿತು ಜು.17ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಆತನ ಗಡೀಪಾರಿಗೆ ಭಾರತದ ತನಿಖಾ ಸಂಸ್ಥೆಗಳು ಮನವಿ ಮಾಡಲಿದ್ದರೆ, ನೇಹಲ್ ಜಾಮೀನು ಕೋರುವ ಸಾಧ್ಯತೆ ಇದೆ.
ಏನಿದು ಪ್ರಕರಣ?: 2018ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 13,500 ಕೋಟಿ ರು. ಹಗರಣ ನಡೆದಿತ್ತು. ಆಭರಣ ಉದ್ಯಮಿ ನೀರವ್ ಮೋದಿ ಹಾಗೂ ಸಂಬಂಧಿ ಮೇಹುಲ್ ಚೋಕ್ಸಿ ಈ ಕೃತ್ಯ ಎಸಗಿದ್ದರು. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಡೀ ಕುಟುಂಬ ವಿದೇಶಕ್ಕೆ ಪರಾರಿಯಾಗಿತ್ತು. ಬಳಿಕ ನೀರವ್ ಮೋದಿಯನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿತ್ತು. ಮತ್ತೊಂದೆಡೆ ಮೇಹುಲ್ ಚೋಕ್ಸಿಯನ್ನು ಭಾರತದ ಕೋರಿಕೆ ಮೇರೆಗೆ ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು. ಇವರಿಬ್ಬರನ್ನೂ ಭಾರತಕ್ಕೆ ಗಡೀಪಾರು ಮಾಡುವ ಯತ್ನದಲ್ಲಿ ಭಾರತ ಸರ್ಕಾರ ಇದ್ದು, ಅದರ ಬೆನ್ನಲ್ಲೇ ನೇಹಲ್ ಬಂಧನವಾಗಿದೆ.
ನೇಹಲ್ ಪಾತ್ರ:
ನೀರವ್ ಮೋದಿ ಎಸಗಿದ ಅಕ್ರಮ ಹಣವನ್ನು ಭಾರತದಿಂದ ಅಕ್ರಮವಾಗಿ ವಿದೇಶಗಳಿಗೆ ನಕಲಿ ಕಂಪನಿಗಳ ಮೂಲಕ ವರ್ಗಾವಣೆ ಮಾಡುವ, ಮಹತ್ವದ ಸಾಕ್ಷ್ಯ ನಾಶ ಮಾಡುವ ಕೆಲಸವನ್ನು ನೇಹಲ್ ಮಾಡಿದ್ದ. ಜೊತೆಗೆ ಅಕ್ರಮದ ಭಾಗವಾಗಿದ್ದ 50 ಕೆಜಿ ಚಿನ್ನ ಮತ್ತು ಭಾರೀ ಪ್ರಮಾಣದ ಹಣವನ್ನು ದುಬೈನಿಂದ ತೆರಿಗೆದಾರರ ಸ್ವರ್ಗ ಎನ್ನುಬಹುದಾದ ದೇಶಗಳಿಗೆ ಸಾಗಿಸಿದ್ದ.
ತನ್ನ ಈ ಕೃತ್ಯದ ಕುರಿತು ಯಾರಿಗೂ ಮಾಹಿತಿ ನೀಡದಂತೆ ದುಬೈ ಕಂಪನಿಯ ನಿರ್ದೇಶಕರಿಗೆ ಬೆದರಿಕೆ ಹಾಕಿದ್ದ. ಜೊತೆಗೆ ಅಪರಾಧ ಕೃತ್ಯದಿಂದ ಸಂಗ್ರಹಿಸಿದ ಹಣವನ್ನು ನಾನ ಹೂಡಿಕೆ, ಖರೀದಿಗೆ ಬಳಸಿಕೊಂಡಿದ್ದ. ಭಾರತೀಯ ಕಾನೂನುಗಳ ಅನ್ವಯ ಇದು ಅಪರಾಧವಾದ ಕಾರಣ ಈತನ ಬಂಧನಕ್ಕೆ ಇ.ಡಿ. ಮತ್ತು ಸಿಬಿಐ ಬಲೆ ಬೀಸಿದ್ದವು.