ಸಾರಾಂಶ
ಮಂಗಳೂರು : ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 111 ವರ್ಷಗಳ ಸಾರ್ಥಕ ಸೇವೆ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ 110.40 ಕೋಟಿ ರು. ಲಾಭ ಗಳಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕಳೆದ ವರ್ಷದ ಲಾಭ (79.09 ಕೋಟಿ ರು.)ಕ್ಕಿಂತ ಶೇ.39.59ರಷ್ಟು ಏರಿಕೆಯನ್ನು ಬ್ಯಾಂಕ್ ಈ ವರ್ಷ ದಾಖಲಿಸಿದೆ. ಇದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ. ಅಲ್ಲದೆ, ಬ್ಯಾಂಕಿನ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.3.52ರಿಂದ ಶೇ.2.71ಕ್ಕೆ ಇಳಿಕೆಯಾಗಿರುವುದು ಕೂಡ ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದರು.
ಈ ವರ್ಷದಲ್ಲಿ 17366.68 ಕೋಟಿ ರು. ಒಟ್ಟು ವ್ಯವಹಾರ ದಾಖಲಿಸಿ ಬ್ಯಾಂಕ್ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರ (15544.34)ಕ್ಕಿಂತ ಈ ಬಾರಿ ಶೇ.11.72ರಷ್ಟು ಏರಿಕೆ ಕಂಡಿದೆ. 2025-26ನೇ ಸಾಲಿಗೆ 19,250 ಕೋಟಿ ರು. ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು.
7882.76 ಕೋಟಿ ರು. ಠೇವಣಿ:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ 113 ಶಾಖೆಗಳ ಮುಖಾಂತರ ಒಟ್ಟು 7882.76 ಕೋಟಿ ರು. ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಕ್ಕಿಂತ ಈ ಬಾರಿ ಶೇ.9.11ರಷ್ಟು ಏರಿಕೆಯಾಗಿದೆ ಎಂದು ಡಾ.ರಾಜೇಂದ್ರ ಕುಮಾರ್ ತಿಳಿಸಿದರು.