ತಾನು ಕೆಲಸ ಮಾಡುವ ಕಂಪನಿಗೆ ನೀಡಬೇಕಿದ್ದ ಹಣ ಬಳಸಿದ್ದವ ಬಂಧನ : ₹11.24 ಲಕ್ಷ ಜಪ್ತಿ

| N/A | Published : Mar 22 2025, 02:02 AM IST / Updated: Mar 22 2025, 04:24 AM IST

ಸಾರಾಂಶ

ತಾನು ಕೆಲಸ ಮಾಡುವ ಕಂಪನಿಗೆ ನೀಡಬೇಕಿದ್ದ ಹಣವನ್ನು ನಗದು ರೂಪದಲ್ಲಿ ಪಡೆದು ಹಾಗೂ ವೈಯಕ್ತಿಕ ಖಾತೆಗೆ ಹಾಸಿಕೊಂಡು ವಂಚಿಸಿದ್ದ ಸೇಲ್ಸ್‌ಮ್ಯಾನ್‌ನನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹11.24 ಲಕ್ಷ ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ತಾನು ಕೆಲಸ ಮಾಡುವ ಕಂಪನಿಗೆ ನೀಡಬೇಕಿದ್ದ ಹಣವನ್ನು ನಗದು ರೂಪದಲ್ಲಿ ಪಡೆದು ಹಾಗೂ ವೈಯಕ್ತಿಕ ಖಾತೆಗೆ ಹಾಸಿಕೊಂಡು ವಂಚಿಸಿದ್ದ ಸೇಲ್ಸ್‌ಮ್ಯಾನ್‌ನನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹11.24 ಲಕ್ಷ ಜಪ್ತಿ ಮಾಡಿದ್ದಾರೆ.

ಹರಿಯಾಣ ಮೂಲದ ಧನಂಜಯ್‌ ಅಗರ್ವಾಲ್‌ (50) ಬಂಧಿತ. ಎಸ್‌.ಪಿ.ರಸ್ತೆಯಲ್ಲಿರುವ ಹಾರ್ಡ್‌ವೇರ್‌ ವಸ್ತುಗಳ ಮಾರಾಟ ಕಂಪನಿ ಮಾಲೀಕ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ನಾಲ್ವರು 2023ರ ಸೆ.1ರಿಂದ 2024ರ ನ.14ರವರೆಗೆ ಹಾರ್ಡ್‌ವೇರ್‌ ಕಂಪನಿಯಲ್ಲಿ ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಆಗ ಬೆಂಗಳೂರು, ಮಂಡ್ಯ, ಚನ್ನಪಟ್ಟಣ ಸೇರಿ ರಾಜ್ಯದ ವಿವಿಧ ಅಂಗಡಿಗಳಿಗೆ ₹96 ಲಕ್ಷ ಮೌಲ್ಯದ ವೆಲ್ಡಿಂಗ್‌ ರಾಡ್‌ಗಳನ್ನು ಮಾರಿದ್ದರು. ಈ ಮಾರಾಟದ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ಹಾಗೂ ನಗದು ರೂಪದಲ್ಲಿ ಪಡೆದುಕೊಂಡು ಕಂಪನಿಗೆ ಮೋಸ ಮಾಡಿದ್ದರು. ಕಂಪನಿ ಮಾಲೀಕರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಈ ಧನಂಜಯ್‌ನನ್ನು ಹರಿಯಾಣದ ಹಿಸ್ಸಾರ ಜಿಲ್ಲೆಯಲ್ಲಿ ಪತ್ತೆ ಮಾಡಿ ನೋಟಿಸ್‌ ಜಾರಿ ಮಾಡಲಾಗಿತ್ತು. ಮಾ.5ರಂದು ವಿಚಾರಣೆಗೆ ಹಾಜರಾಗಿದ್ದ ಆತ ಈ ಕಂಪನಿಯಲ್ಲಿ ಕೆಲಸ ಮಾಡುವಾಗ ವಂಚನೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇದೇ ಪ್ರಕರಣದಲ್ಲಿ ಮತ್ತಿಬ್ಬರು ಮಾಜಿ ಸೇಲ್ಸ್‌ಮ್ಯಾನ್‌ಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆ ಕಂಡು ಬಂದಿಲ್ಲ. ಹೀಗಾಗಿ ಇಬ್ಬರಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಮತ್ತೋರ್ವನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.