ಸಾರಾಂಶ
ದಿನೇದಿನೆ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದನ್ನು ಕಂಡು ಗ್ರಾಹಕರು ಕೈಕೈ ಹಿಸುಕಿಕೊಳ್ಳುತ್ತಿದ್ದರೆ, ಇತ್ತ ದಕ್ಷಿಣ ಏಷ್ಯಾದಲ್ಲಿಯೇ ಪ್ರತಿಷ್ಠಿತವೆನಿಸಿರುವ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದಗಣಿ ಕಂಪನಿ ದಾಖಲೆಯ ಲಾಭಗಳಿಸುವ ಖುಷಿಯಲ್ಲಿದೆ.
ಹಟ್ಟಿ ಚಿನ್ನದಗಣಿ (ರಾಯಚೂರು) : ದಿನೇದಿನೆ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದನ್ನು ಕಂಡು ಗ್ರಾಹಕರು ಕೈಕೈ ಹಿಸುಕಿಕೊಳ್ಳುತ್ತಿದ್ದರೆ, ಇತ್ತ ದಕ್ಷಿಣ ಏಷ್ಯಾದಲ್ಲಿಯೇ ಪ್ರತಿಷ್ಠಿತವೆನಿಸಿರುವ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದಗಣಿ ಕಂಪನಿ ದಾಖಲೆಯ ಲಾಭಗಳಿಸುವ ಖುಷಿಯಲ್ಲಿದೆ. ಕಂಪನಿ ತನ್ನ ಇತಿಹಾಸದಲ್ಲೇ ಅತ್ಯಧಿಕ ಅಂದರೆ 210 ಕೋಟಿ ರು. ಲಾಭ ಗಳಿಸಿ ದಾಖಲೆ ಬರೆಯಲು ದಾಪುಗಾಲಿಡುತ್ತಿದೆ.
ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿಚಿನ್ನದ ಗಣಿ ಕಂಪನಿ 2024-25ನೇ ಸಾಲಿನಲ್ಲಿ 1,600 ಕೆಜಿ ಚಿನ್ನ ಉತ್ಪಾದನೆಯ ಗುರಿ ಹಾಕಿಕೊಂಡಿದೆ. ಕಳೆದ ಏಪ್ರಿಲ್‌ನಿಂದ ಫೆಬ್ರುವರಿವರೆಗೆ (11ತಿಂಗಳಲ್ಲಿ ) ಬರೋಬ್ಬರಿ 1355.161 ಕೆಜಿ ಚಿನ್ನ ಉತ್ಪಾದಿಸಿದೆ. ಕೊನೆ ಇನ್ನೊಂದು ತಿಂಗಳಲ್ಲಿ ಗುರಿ ತಲುಪಿ 210 ಕೋಟಿ ರು. ಲಾಭ ಹೊಂದುವ ನಿಟ್ಟಿನಲ್ಲಿ ಕಂಪನಿ ಕೆಲಸಕಾರ್ಯಗಳು ಭರದಿಂದ ಸಾಗಿವೆ. 2021-22ರಲ್ಲಿ 180 ಕೋಟಿ (ನಿವ್ವಳ 130ಕೋಟಿ) ಲಾಭಗಳಿಸಿದ್ದು, ಕಳೆದ ವರ್ಷ 1553 ಕೆಜಿ ಚಿನ್ನ ಉತ್ಪಾದಿಸಿ 150 ಕೋಟಿ ರು. ನಿವ್ವಳ ಲಾಭಗಳಿಸಿತ್ತು.
ಪ್ರತಿ ಟನ್ ಅದಿರಲ್ಲಿ ಸರಾಸರಿ 2.43 ಗ್ರಾಂ ಉತ್ಪಾದನೆ ಗುರಿ ಹೊಂದಿದ್ದರೂ ಸರಾಸರಿ 2.54 ಗ್ರಾಂ. ಚಿನ್ನ ಉತ್ಪಾದನೆ ಸಾಧ್ಯವಾಗಿರುವುದು, ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ಗೆ 90 ಸಾವಿರ ರು. ತಲುಪಿದ್ದು ಕಂಪನಿ ಸಾಧನೆಗೆ ಸಾಕಷ್ಟು ಸಹಕಾರಿಯಾಗಿದೆ.