ಸಾರಾಂಶ
ಬೆಂಗಳೂರು : ಇಬ್ಬರು ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂಬಾಲಿಸಿ ಬಂದ ಕಾಮುಕನೊಬ್ಬ ಯುವತಿಯೊಬ್ಬಳ ಮೇಲೆ ಎರಗಿ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ಪರಾರಿ ಆಗಿರುವ ಘಟನೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏ.3ರ ಮುಂಜಾನೆ ಸುಮಾರು 1.55ಕ್ಕೆ ಈ ಘಟನೆ ನಡೆದಿದೆ. ಕಾಮುಕನ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ಎಂಬುವವರು ನೀಡಿದ ದೂರಿನ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ಕಾಮುಕನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ:
ಇಬ್ಬರು ಯುವತಿಯರು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏ.3ರ ಮುಂಜಾನೆ ಸುಮಾರು 1.55ಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಏಕಾಏಕಿ ಓರ್ವ ಯುವತಿಯನ್ನು ಹಿಡಿದುಕೊಂಡು ಗೋಡೆಗೆ ಒರಗಿಸಿ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಆ ಯುವತಿಯರು ಜೋರಾಗಿ ಕಿರುಚಿದ ಪರಿಣಾಮ ಆತ ಕಾಲ್ಕಿತ್ತಿದ್ದಾನೆ. ಈ ಘಟನೆಯ ದೃಶ್ಯ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಿರುಕುಳ ಅನುಭವಿಸಿದ ಯುವತಿಯರು ಘಟನೆ ಸಂಬಂಧ ದೂರು ನೀಡಿಲ್ಲ. ಆದರೆ, ಸ್ಥಳೀಯ ನಿವಾಸಿಯೊಬ್ಬರು ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾಮುಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಿದ್ದು ಏನು?
*ಏ.3ರ ಮುಂಜಾನೆ 1.55ಕ್ಕೆ ನಡೆದುಕೊಂಡು ಹೋಗುತ್ತಿದ್ದ ಯುವತಿಯರು
*ಈ ವೇಳೆ ಏಕಾಏಕಿ ಬಂದ ಕಾಮುಕ, ಒಬ್ಬಾಕೆ ಮೇಲೆ ಎರಗಿ ಕಿರುಕುಳ
*ತಕ್ಷಣ ಕಿರುಚಿಕೊಂಡ ಯುವತಿಯರು, ಕಾಮುಕ ತಕ್ಷಣವೇ ಜಾಗ ಕಾಲಿ
*ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ, ಠಾಣೆಗೆ ದೂರು ನೀಡದ ಯುವತಿ
*ಸ್ಥಳೀಯ ನಿವಾಸಿಯೊಬ್ಬರು ಸುದ್ದಗುಂಟೆ ಪಾಳ್ಯ ಠಾಣೆಗೆ ದೂರು, ಶೋಧ