ಸಾರಾಂಶ
ಸಗಟು ದರದಲ್ಲಿ 21 ಕ್ಯಾರೆಟ್ ಚಿನ್ನದ ಆಭರಣಗಳಿಗೆ 24 ಕ್ಯಾರೆಟ್ ಪರಿಶುದ್ಧ ಚಿನ್ನ ಕೊಡುವುದಾಗಿ ನಂಬಿಸಿ ವ್ಯಾಪಾರಿಗೆ ವಂಚಿಸಿದ್ದ ಕಿಡಿಗೇಡಿಯೊಬ್ಬನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಗಟು ದರದಲ್ಲಿ 21 ಕ್ಯಾರೆಟ್ ಚಿನ್ನದ ಆಭರಣಗಳಿಗೆ 24 ಕ್ಯಾರೆಟ್ ಪರಿಶುದ್ಧ ಚಿನ್ನ ಕೊಡುವುದಾಗಿ ನಂಬಿಸಿ ವ್ಯಾಪಾರಿಗೆ ವಂಚಿಸಿದ್ದ ಕಿಡಿಗೇಡಿಯೊಬ್ಬನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಟಿ.ದಾಸರಹಳ್ಳಿಯ ಕಲ್ಯಾಣನಗರದ ನಿವಾಸಿ ಮೋಹನ್ ಲಾಲ್ ಬಂಧಿತನಾಗಿದ್ದು, ಆರೋಪಿಯಿಂದ 302 ಗ್ರಾಂ ಎರಡು ಚಿನ್ನ ಗಟ್ಟಿಗಳು ಹಾಗೂ ಚಿನ್ನ ಕರಗಿಸುವ ಯಂತ್ರ ಸೇರಿ ಒಟ್ಟು 30 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಗರ್ತಪೇಟೆಯ ಚಿನ್ನಾಭರಣ ವ್ಯಾಪಾರಿ ಹುಸೇನ್ ಆಲಿ ಅವರಿಂದ 1.5 ಕೆಜಿ ಚಿನ್ನ ಪಡೆದು ಮೋಹನ್ ವಂಚಿಸಿದ್ದ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಕ್ರಿಮಿನಲ್ ಹಿನ್ನೆಲೆಯುವಳ್ಳನಾಗಿದ್ದು, ಆತನ ಮೇಲೆ ಹಲಸೂರು ಗೇಟ್ ಹಾಗೂ ಎಸ್.ಆರ್. ನಗರ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಸಗಟು ದರದಲ್ಲಿ ಚಿನ್ನ ಮಾರಾಟ ನೆಪದಲ್ಲಿ ಚಿನ್ನಾಭರಣ ವ್ಯಾಪಾರಿಗಳಿಗೆ ವಂಚಿಸುವುದು ಆತನ ಕೃತ್ಯವಾಗಿತ್ತು. ಇದೇ ರೀತಿ ಎರಡು ವರ್ಷಗಳ ಹಿಂದೆ ಸಹ ವ್ಯಾಪಾರಿಯೊಬ್ಬರಿಗೆ ವಂಚನೆ ಪ್ರಕರಣದಲ್ಲಿ ಮೋಹನ್‌ನನ್ನು ಬಂಧಿಸಿ ಹಲಸೂರು ಗೇಟ್ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ತನ್ನ ಚಾಳಿಯನ್ನು ಮೋಹನ್ ಮುಂದುವರಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಚಿನ್ನಾಭರಣ ವ್ಯಾಪಾರಿ ಹುಸೇನ್ ಅವರಿಗೆ 21 ಕ್ಯಾರೆಟ್ ಚಿನ್ನಾಭರಣಗಳಿಗೆ ಅಷ್ಟೇ ತೂಕದ 24 ಕ್ಯಾರೆಟ್ (999 ಗೋಲ್ಡ್) ಪರಿಶುದ್ಧ ಚಿನ್ನದ ಗಟ್ಟಿಯನ್ನು ಸಗಟು ದರದಲ್ಲಿ ಕೊಡುವುದಾಗಿ ನಂಬಿಸಿ ಚಿನ್ನ ಪಡೆದು ಮೋಹನ್ ಟೋಪಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.