ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಹಿಡಿದು ಲೈಂಗಿಕ ಕಿರುಕುಳ ನೀಡಿದ್ದವ ಕೇರಳದಲ್ಲಿ ಬಂಧನ

| N/A | Published : Apr 14 2025, 02:01 AM IST / Updated: Apr 14 2025, 04:28 AM IST

ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಹಿಡಿದು ಲೈಂಗಿಕ ಕಿರುಕುಳ ನೀಡಿದ್ದವ ಕೇರಳದಲ್ಲಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಹಿಡಿದುಕೊಂಡು ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಹಿಡಿದುಕೊಂಡು ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಲಕನಗರದ ಗುಲ್ಬರ್ಗ ಕಾಲೋನಿ ನಿವಾಸಿ ಸಂತೋಷ್‌ ಡೇನಿಯಲ್‌ (26) ಬಂಧಿತ. ಆರೋಪಿಯು ಏ.3ರ ಮುಂಜಾನೆ 1.55ಕ್ಕೆ ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಇಬ್ಬರು ಯುವತಿಯರು ನಡೆದುಕೊಂಡು ಹೋಗುವಾಗ ಹಿಂಬಾಲಿಸಿ ಯುವತಿಯೊಬ್ಬಳನ್ನು ಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಕಾಮುಕನ ದುಷ್ಕ್ಯತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೆರಳದ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಭಾನುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಕೇರಳದಿಂದ ನಗರಕ್ಕೆ ಕರೆತಂದು ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದ್ದಾರೆ.

ತಮಿಳುನಾಡು ಮೂಲದ ಸಂತೋಷ್‌ ಡೇನಿಯಲ್‌ ಹಲವು ವರ್ಷಗಳಿಂದ ತಿಲಕನಗರದ ಗುಲ್ಬರ್ಗ ಕಾಲೋನಿಯಲ್ಲಿ ತಾಯಿ ಹಾಗೂ ಸಹೋದರನೊಂದಿಗೆ ನೆಲೆಸಿದ್ದ. ಆರೋಪಿಯು ಬ್ರೂಕ್‌ಫೀಲ್ಡ್‌ನ ಖಾಸಗಿ ಕಾರು ಶೋರೂಮ್‌ನಲ್ಲಿ ಟೆಸ್ಟ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ.

600ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಪರಿಶೀಲನೆ:

ಈ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಆರೋಪಿಯ ಬಂಧನಕ್ಕೆ ಪೊಲೀಸರ 4 ವಿಶೇಷ ತಂಡ ರಚಿಸಲಾಗಿತ್ತು. ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಸೇರಿದಂತೆ ಸುಮಾರು 600ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದರು. ಪೊಲೀಸರು ತನ್ನ ಬಂಧನಕ್ಕೆ ಹುಡುಕಾಡುತ್ತಿರುವ ವಿಚಾರ ತಿಳಿದ ಸಂತೋಷ್‌, ಏ.9ರಂದು ನಗರ ತೊರೆದು ತಮಿಳುನಾಡಿನ ಹೊಸೂರು, ಸೇಲಂ ಮುಖಾಂತರ ಕೇರಳದ ಕಾಝಿಕೋಡ್‌ಗೆ ಪ್ರಯಾಣಿಸಿದ್ದ. ಬಳಿಕ ಅಲ್ಲಿನ ನಡುವೆವಿಲಂಗಡಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಕೊನೆಗೂ ಆರೋಪಿಯ ಜಾಡು ಹಿಡಿದ ಪೊಲೀಸರ ತಂಡ ಕೇರಳಕ್ಕೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಬೈಕ್‌ ನೋಂದಣಿ ಸಂಖ್ಯೆಯಿಂದ ವಿಳಾಸ ಪತ್ತೆ:

ಆರೋಪಿ ಸಂತೋಷ್‌ ಘಟನೆ ಬಳಿಕ ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ. ಎಲ್ಲಿಯೂ ತನ್ನ ಎಟಿಯಂ ಕಾರ್ಡ್‌ಗಳಿಂದ ಹಣ ಡ್ರಾ ಮಾಡಿರಲಿಲ್ಲ. ಆನ್‌ಲೈನ್‌ ಪಾವತಿಯನ್ನೂ ಮಾಡಿರಲಿಲ್ಲ. ಹೀಗಾಗಿ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಆರೋಪಿ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಪತ್ತೆಯಾಗಿತ್ತು. ಈ ನೋಂದಣಿ ಸಂಖ್ಯೆಯನ್ನು ಆರ್‌ಟಿಓಗೆ ಕಳುಹಿಸಿ ಆರೋಪಿಯ ವಿಳಾಸವನ್ನು ಪತ್ತೆ ಮಾಡಿದ್ದರು. ಪೊಲೀಸರು ಆತನ ಮನೆಗೆ ತೆರಳುವ ವೇಳೆಗೆ ಆರೋಪಿ ಪರಾರಿಯಾಗಿದ್ದ. ಕಡೆಗೆ ಪೊಲೀಸರು ಕೆಲವು ತಾಂತ್ರಿಕ ಸುಳಿವಿನ ಮೇರೆಗೆ ಕೇರಳದಲ್ಲಿ ಆರೋಪಿ ತಲೆಮರೆಸಿಕೊಂಡಿರುವ ಮಾಹಿತಿ ಸಂಗ್ರಹಿಸಿ ಬಂಧಿಸಿದ್ದಾರೆ.