ಸಾರಾಂಶ
ಗಣೇಶ ಮೂರ್ತಿ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲಾಗಿರುವ ಘಟನೆ ಕಾರ್ಕಳ್ಳಿ ಸಮೀಪದ ಕ್ಯಾತಘಟ್ಟ ಗ್ರಾಮದ ಬಳಿ ಹೆಬ್ಬಾಳ ನಾಲೆಯಲ್ಲಿ ಸೋಮವಾರ ರಾತ್ರಿ ಜರುಗಿದೆ. ಮದ್ದೂರು ತಾಲೂಕಿ ಸಿ.ಎ.ಕೆರೆ ಹೋಬಳಿಯ ಕಾರ್ಕಳ್ಳಿ ಗ್ರಾಮದ ರವಿಕುಮಾರ್ (40) ಮೃತಪಟ್ಟ ದುರ್ದೈವಿ. ಮೃತನ ಶವವನ್ನು ಗ್ರಾಮದ ಯುವಕರು ಮಂಗಳವಾರ ಬೆಳಗ್ಗೆ ನೀರಿನಿಂದ ಹೊರ ತೆಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಗಣೇಶ ಮೂರ್ತಿ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲಾಗಿರುವ ಘಟನೆ ಕಾರ್ಕಳ್ಳಿ ಸಮೀಪದ ಕ್ಯಾತಘಟ್ಟ ಗ್ರಾಮದ ಬಳಿ ಹೆಬ್ಬಾಳ ನಾಲೆಯಲ್ಲಿ ಸೋಮವಾರ ರಾತ್ರಿ ಜರುಗಿದೆ.ಮದ್ದೂರು ತಾಲೂಕಿ ಸಿ.ಎ.ಕೆರೆ ಹೋಬಳಿಯ ಕಾರ್ಕಳ್ಳಿ ಗ್ರಾಮದ ರವಿಕುಮಾರ್ (40) ಮೃತಪಟ್ಟ ದುರ್ದೈವಿ. ಮೃತನ ಶವವನ್ನು ಗ್ರಾಮದ ಯುವಕರು ಮಂಗಳವಾರ ಬೆಳಗ್ಗೆ ನೀರಿನಿಂದ ಹೊರ ತೆಗಿದ್ದಾರೆ.
ಗೌರಿ-ಗಣೇಶ ಹಬ್ಬದ ಅಂಗವಾಗಿ ಕಾರ್ಕಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ವಿಸರ್ಜನೆ ಅಂಗವಾಗಿ ಸೋಮವಾರ ಸಂಜೆ ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಕೂಡ ನಡೆಸಲಾಗಿತ್ತು. ಮಧ್ಯರಾತ್ರಿ ಕ್ಯಾತಘಟ್ಟ ಗ್ರಾಮದ ಬಳಿ ಹೆಬ್ಬಾಳ ನಾಲೆಗೆ ವಿಸರ್ಜನೆ ಮಾಡಲು 20 ರಿಂದ 30 ಜನ ಆಗಮಿಸಿ ಪೂಜೆ ಸಲ್ಲಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ನೀರಿಗೆ ಇಳಿದಿದ್ದಾರೆ.ಈ ವೇಳೆ ನೀರಿನ ರಭಸಕ್ಕೆ ರವಿಕುಮಾರ್ ಕೊಚ್ಚಿ ಹೋಗಿದ್ದಾನೆ. ತಕ್ಷಣವೇ ಸ್ಥಳದಲಿದ್ದ ಸ್ಥಳೀಯರು ರವಿಯನ್ನು ರಕ್ಷಣೆಗೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಂಗಳವಾರ ಮುಂಜಾನೆಯಿಂದಲೇ ಕೆ.ಎಂ.ದೊಡ್ಡಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾರ್ಕಳ್ಳಿ ಯುವಕರ ಜತೆಗೂಡಿ ಕಾರ್ಯಾಚರಣೆ ನಡೆಸಿ ನೀರಿನ ರಭಸಕ್ಕೆ ಕೊಚ್ಚಿಹೋಗಿ ಸಾವನ್ನಪ್ಪಿದ್ದ ಯುವಕನ ಮೃತದೇಹವನ್ನು ನೀರಿನಿಂದ ಹೊರತೆಗಿಯಲಾಯಿತು.
ನಂತರ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.ಈ ಸಂಬಂಧ ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.