ಸಾರಾಂಶ
ಬೆಂಗಳೂರು : ತನಗೆ ವಿದಾಯ ಹೇಳಿ ಪಾಕಿಸ್ತಾನದ ಪ್ರಜೆ ಜತೆ ಎರಡನೇ ಮದುವೆಗೆ ಮುಂದಾಗಿದ್ದ ಪ್ರಿಯತಮೆಯನ್ನು ಕೊಂದ ಬಳಿಕ ಆತ್ಮಹತ್ಯೆ ನಾಟಕ ಕಟ್ಟಿದ್ದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬನ ಕಪಟತನ ಬಯಲಾಗಿ ಕೊನೆಗೆ ಜೈಲು ಸೇರಿದ್ದಾನೆ.
ಎಚ್‌ಬಿಆರ್ ಲೇಔಟ್ ನಿವಾಸಿ ಉಜ್ಮಾ ಖಾನ್ (45) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪ್ರಿಯಕರ ಇಮ್ದಾದ್ ಬಾಷನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಸ ವರ್ಷಾಚರಣೆ ನೆಪದಲ್ಲಿ ಕುಂದಲಹಳ್ಳಿ ಸ್ಪೈಸ್ ಗಾರ್ಡನ್ ದೀಪಂ ನಿವಾಸ್‌ನ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ಗೆ ಗೆಳತಿಯನ್ನು ಕರೆದು ವಿಷಪ್ರಾಶನ ಮಾಡಿಸಿ ಬಾಷ ಹತ್ಯೆಗೈದಿದ್ದ. ತಮ್ಮ ಮದುವೆಗೆ ಕುಟುಂಬದವರು ವಿರೋಧಿಸಿದ ಕಾರಣಕ್ಕೆ ನಾವಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದೇವು. ದುರಾದೃಷ್ಟಕರ ಆಕೆ ಮೃತಪಟ್ಟಿದ್ದಾಳೆ ಎಂದು ಆತ ಹೇಳಿದ್ದ. ಆದರೆ, ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದ್ದು, ಮೃತ ಉಜ್ಮಾ ಸೋದರಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಹೊಸ ವರ್ಷದ ದಿನವೇ ಹತ್ಯೆ:
ಹೊಸ ವರ್ಷದ ಸಂಭ್ರಮಾಚರಣೆ ನಿಮಿತ್ತ ತನ್ನ ಫ್ಲ್ಯಾಟ್‌ಗೆ ಪ್ರಿಯತಮೆಯನ್ನು ಬಾಷ ಆಹ್ವಾನಿಸಿದ್ದ. ಆಗ ಉಜ್ಮಾಳಿಗೆ ಊಟದಲ್ಲಿ ವಿಷ ಬೆರೆಸಿ ಕೊಟ್ಟು ಕೊಲೆ ಮಾಡಿದ ಬಳಿಕ ತಾನು ಹಾರ್ಪಿಕ್ ಸೇವಿಸಿ ಮೃತಳ ಸೋದರಿಗೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಮಾಡಿದ್ದ. ಈ ಸಂದೇಶ ನೋಡಿದ ಕೂಡಲೇ ಪೊಲೀಸರಿಗೆ ಮೃತಳ ಸಂಬಂಧಿಕರು ಮಾಹಿತಿ ನೀಡಿದ್ದರು. ತಕ್ಷಣವೇ ಅಪಾರ್ಟ್‌ಮೆಂಟ್‌ಗೆ ತೆರಳಿ ಅಸ್ವಸ್ಥರಾಗಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಮರಣೋತ್ತರ ಪರೀಕ್ಷೆ ಬಿಚ್ಚಿಟ್ಟ ಸತ್ಯ:
ಮೃತದೇಹ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಜ್ಮಾ ಮೃತಪಟ್ಟು 10 ರಿಂದ 12 ಗಂಟೆಗಳಾಗಿವೆ ಎಂದು ಉಲ್ಲೇಖವಾಗಿತ್ತು. ಆಗ ತನ್ನ ಸಂಬಂಧಿಕರಿಗೆ ಬಾಷ ಮಾಡಿದ್ದ ಮೆಸೇಜ್ ಸಮಯಕ್ಕೂ ಉಜ್ಮಾ ಮೃತಪಟ್ಟ ಸಮಯಕ್ಕೂ ತಾಳೆ ಹಾಕಿದಾಗ ಪೊಲೀಸರಿಗೆ ಶಂಕೆ ಮೂಡಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಮೊದಲು ಅಸಹಜ ಸಾವು ಪ್ರಕರಣವೆಂದು ದಾಖಲಾಗಿದ್ದ ಪ್ರಕರಣವನ್ನು ಕೊಲೆ ಕೃತ್ಯವೆಂದು ಬದಲಾಯಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕ್ ವ್ಯಕ್ತಿ ಜತೆಗೆ ವಿವಾಹಿತೆ ಲವ್:ವಿವಾಹ ವಿಚ್ಚೇದನ ಪಡೆದು 2017ರಲ್ಲಿ ಮುಂಬೈನಿಂದ ನಗರಕ್ಕೆ ಮರಳಿದ ಬಾಷ, ಥಣಿಸಂದ್ರದ ಶೋಭ ಅಪಾರ್ಟ್ ಮೆಂಟ್‌ನಲ್ಲಿ ನೆಲೆಸಿದ್ದ. ಅದೇ ಅಪಾರ್ಟ್‌ಮೆಂಟ್‌ನಲ್ಲಿ ಉಜ್ಮಾಳಿಗೂ ಫ್ಲ್ಯಾಟ್ ಕೊಡಿಸಿದ್ದ. ಅದೇ ಫ್ಲ್ಯಾಟ್‌ನಲ್ಲಿ ಆಗಾಗ್ಗೆ ಇಬ್ಬರು ಭೇಟಿಯಾಗುತ್ತಿದ್ದರು. 10 ತಿಂಗಳ ಹಿಂದೆ ಕೆಲಸದ ನಿಮಿತ್ತ ಮತ್ತೆ ಮುಂಬೈಗೆ ಬಾಷ ಮರಳಿದ. ಬಳಿಕ ಎಚ್‌ಬಿಆರ್ ಲೇಔಟ್‌ನಲ್ಲಿರುವ ತಾಯಿ ಮನೆಯಲ್ಲಿ ಉಜ್ಮಾ ನೆಲೆಸಿದ್ದಳು. ಕಳೆದ ವರ್ಷ ಪ್ರಿಯತಮೆ ಜತೆ 2ನೇ ವಿವಾಹಕ್ಕೆ ಸಿದ್ಧತೆ ನಡೆಸಿದ್ದ ಬಾಷ, ಮುಂಬೈನಿಂದ ಮರಳಿ ಬಂದು ಕುಂದಲಹಳ್ಳಿಯಲ್ಲಿ ವಾಸವಾಗಿದ್ದ.
ಈ ನಡುವೆ ಉಜ್ಮಾಳಿಗೆ ಬೇರೊಬ್ಬನ ಜತೆ ಮದುವೆಗೆ ಆಕೆಯ ಕುಟುಂಬದವರು ತಯಾರಿ ನಡೆಸಿದ್ದರು. ಅದೇ ವೇಳೆ ಆಕೆಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಆಸ್ಟ್ರೀಯಾ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆ ಅರ್ಶದ್ ಜತೆ ಪರಿಚಯವಾಗಿತ್ತು. ಈ ಸ್ನೇಹದ ಸಂಗತಿ ತಿಳಿದು ಕೆರಳಿದ ಬಾಷ, ಡಿ.31 ರಂದು ರಾತ್ರಿ ಪ್ರಿಯತಮೆ ಕೊಲೆಗೆ ಸಂಚು ರೂಪಿಸಿ ತಾನೇ ತಯಾರಿಸಿದ್ದ ಊಟದ ಪೋಟೋವನ್ನು ಆಕೆಗೆ ಕಳುಹಿಸಿದ್ದ. ಆ ಪೋಟೋಗೆ THAT LOOKS SIZZLING ಎಂದು ಪ್ರತಿಕ್ರಿಯಿಸಿದ್ದ ಆಕೆ, ಕೊನೆಗೆ ರಾತ್ರಿ 9.30 ಕ್ಕೆ ಬಾಷನ ಫ್ಲ್ಯಾಟ್‌ಗೆ ಹೋಗಿದ್ದಳು. ಆಗ ಮಧ್ಯೆ ರಾತ್ರಿ ಮದುವೆ ವಿಚಾರ ಪ್ರಸ್ತಾಪವಾಗಿ ಪ್ರಿಯತಮೆ ಜತೆ ಆತ ಜಗಳವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಬಾಲ್ಯದ ಪ್ರೇಮ ತಂದ ಆಪತ್ತು
ಮೃತ ಉಜ್ಮಾ ಹಾಗೂ ಬಾಷ ಸಂಬಂಧಿಕರಾಗಿದ್ದು, ಬಾಲ್ಯದಿಂದಲೂ ಇಬ್ಬರು ಆತ್ಮೀಯವಾಗಿದ್ದರು. ಆದರೆ, ಈ ಪ್ರೇಮಕ್ಕೆ ಕುಟುಂಬದವರು ವಿರೋಧಿಸಿದ್ದರಿಂದ ಬೇರೊಬ್ಬರ ಜೊತೆ ಇಬ್ಬರು ಮದುವೆಯಾಗಿದ್ದರು. ಆದರೂ ಈ ಜೋಡಿ ಸಂಪರ್ಕ ಮುಂದುವರೆದಿತ್ತು. ಕೆಲ ವರ್ಷಗಳ ಬಳಿಕ ಕೌಟುಂಬಿಕ ಕಲಹ ಹಿನ್ನೆಲೆ ತನ್ನ ಪತಿಗೆ ಉಜ್ಮಾ ಹಾಗೂ ತನ್ನ ಪತ್ನಿಗೆ ಬಾಷ ವಿವಾಹ ವಿಚ್ಛೇದನ ಕೊಟ್ಟಿದ್ದರು. ನಂತರ ಮುಂಬೈನಲ್ಲಿ ನೆಲೆಸಿದ್ದ ಬಾಷ, ನಗರಕ್ಕೆ ಬಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ ನಂತರ ಹಳೇ ಪ್ರೇಮ ಮತ್ತೆ ಚಿಗುರಿತು ಎನ್ನಲಾಗಿದೆ. ಕೆಲ ದಿನಗಳ ಬಳಿಕ ಬಾಷ ಜತೆ ದೂರವಾಗಲು ನಿರ್ಧರಿಸಿದ್ದ ಉಜ್ಮಾ, ಪಾಕಿಸ್ತಾನ ಪ್ರಜೆ ಜತೆ 2ನೇ ಮದುವೆಯಾಗಲು ಮುಂದಾಗಿದ್ದಳು. ಈ ಸಂಗತಿ ತಿಳಿದು ಕೆರಳಿದ ಬಾಷ, ತನ್ನ ಪ್ರಿಯತಮೆ ಉಜ್ಮಾಳನ್ನು ಹತ್ಯೆಗೈಯಲು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.