ಬೆಂಗಳೂರಿನಲ್ಲಿ ₹7 ಕೋಟಿ ದೋಚಿದ್ದವರು ಅರೆಸ್ಟ್‌

| Published : Nov 23 2025, 02:00 AM IST

ಸಾರಾಂಶ

ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರು. ದರೋಡೆ ಪ್ರಕರಣ ಸಂಬಂಧ ಒಬ್ಬ ಪೊಲೀಸ್ ಪೇದೆ ಹಾಗೂ ಸಿಎಂಎಸ್ ಕಂಪನಿಯ ಉದ್ಯೋಗಿ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಮತ್ತು ದಕ್ಷಿಣ ವಿಭಾಗದ ಪೊಲೀಸರು ಜಂಟಿಯಾಗಿ ಬಂಧಿಸಿ, 6.29 ಕೋಟಿ ರು. ಹಣ ಜಪ್ತಿ ಮಾಡಿದ್ದಾರೆ.

ಬಲೆಗೆ- ₹6.29 ಕೋಟಿ ಜಪ್ತಿ । 6 ಮಂದಿ ಸೆರೆ- ಬಾರಲ್ಲಿ ಸ್ಕೆಚ್‌, 3 ತಿಂಗಳು ಪ್ಲಾನ್‌

---

ಎಟಿಎಂಗೆ ಸಾಗಿಸಲೆಂದು ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಬುಧವಾರ ಬೆಂಗ್ಳೂರಲ್ಲಿ 7 ಕೋಟಿ ಲೂಟಿ

ಹಾಡಹಗಲೇ ನಡೆದ ಘಟನೆ ಬಗ್ಗೆ ಆಕ್ರೋಶ. ತನಿಖೆಗೆ ಪೊಲೀಸರಿಂದ ಹಲವು ತಂಡ ರಚನೆ, ಶೋಧ

ಘಟನೆ ನಡೆದ ಕೇವಲ 52 ಗಂಟೆಯಲ್ಲೇ ಪೇದೆ ಸೇರಿ 6 ಜನರ ಬಂಧನ. 6.29 ಕೋಟಿ ಹಣ ಜಪ್ತಿ

==ಕನ್ನಡಪ್ರಭ ವಾರ್ತೆ ಬೆಂಗಳೂರು

ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರು. ದರೋಡೆ ಪ್ರಕರಣ ಸಂಬಂಧ ಒಬ್ಬ ಪೊಲೀಸ್ ಪೇದೆ ಹಾಗೂ ಸಿಎಂಎಸ್ ಕಂಪನಿಯ ಉದ್ಯೋಗಿ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಮತ್ತು ದಕ್ಷಿಣ ವಿಭಾಗದ ಪೊಲೀಸರು ಜಂಟಿಯಾಗಿ ಬಂಧಿಸಿ, 6.29 ಕೋಟಿ ರು. ಹಣ ಜಪ್ತಿ ಮಾಡಿದ್ದಾರೆ.

ಗೋವಿಂದಪುರ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್‌, ಸಿಎಂಎಸ್ ಇನ್ಫೋ ಸಿಸ್ಟಮ್‌ ಕಂಪನಿಯ ಹಾಲಿ ಉದ್ಯೋಗಿ ಗೋಪಿ, ಮಾಜಿ ನೌಕರ ಕ್ಸೇವಿಯರ್ ಅಲಿಯಾಸ್ ಪ್ರಜನ್‌, ಕಮ್ಮನಹಳ್ಳಿಯ ರವಿ, ನೆಲ್ಸನ್‌ ಹಾಗೂ ನವೀನ್ ಬಂಧಿತರಾಗಿದ್ದು, ಆರೋಪಿಗಳಿಂದ ಒಟ್ಟು 6.29 ಕೋಟಿ ರು. ಹಣ ಜಪ್ತಿಯಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳು ಹಾಗೂ ಉಳಿಕೆ ಹಣಕ್ಕೆ ಹೊರರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಬುಧವಾರ ಜಯನಗರದ ಅಶೋಕ ಪಿಲ್ಲರ್‌ ಬಳಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಆರೋಪಿಗಳು ದರೋಡೆ ಮಾಡಿದ್ದರು. ಸತತ 52 ಗಂಟೆಗಳ ಕಾಲ ಸಿಸಿಬಿ ಹಾಗೂ ದಕ್ಷಿಣ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದರೋಡೆಯಾದ ಹಣವು ಬಹುತೇಕ ಪತ್ತೆಯಾಗಿದೆ. ತಾಂತ್ರಿಕ ಮಾಹಿತಿ ಹಾಗೂ ಮೂಲ ಪೊಲೀಸ್ ಮಾದರಿ ಅನುಸರಿಸಿ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಇಬ್ಬರನ್ನು ನಗರದಲ್ಲೇ ಸೆರೆ ಹಿಡಿಯಲಾಗಿದೆ. ನಗರದ ಹೊರವಲಯದಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬಾರ್‌ನಲ್ಲಿ ಪ್ಲ್ಯಾನ್‌:

ಸಿಎಂಎಸ್ ಕಂಪನಿಯಲ್ಲಿ ವರ್ಷದ ಹಿಂದಷ್ಟೇ ಕ್ಸೇವಿಯರ್ ನೌಕರಿ ತೊರೆದಿದ್ದು, ಎರಡ್ಮೂರು ವರ್ಷಗಳಿಂದ ಕಂಪನಿಯಲ್ಲಿ ವಾಹನಗಳ ನಿರ್ವಹಣೆ ವಿಭಾಗದಲ್ಲಿ ಗೋಪಿ ಕೆಲಸ ಮಾಡುತ್ತಿದ್ದ. ಇಬ್ಬರೂ ಪರಸ್ಪರ ಪರಿಚಿತರಾಗಿದ್ದರು. ಮೂರು ವರ್ಷಗಳಿಂದ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್‌ ಅಣ್ಣಪ್ಪನ ಜತೆ ಕ್ಸೇವಿಯರ್‌ಗೆ ಸ್ನೇಹವಿತ್ತು. ಆತನಿಗೆ ಗೋಪಿ ಸಹೋದ್ಯೋಗಿಯಾಗಿದ್ದರೆ, ಅಣ್ಣಪ್ಪ ‘ಬಾಟಲ್‌’ಮೇಟ್ ಆಗಿದ್ದ. ಬಾಣಸವಾಡಿ ಹಾಗೂ ಕಮ್ಮನಹಳ್ಳಿ ಕಡೆ ಬಾರ್‌ಗಳಲ್ಲಿ ಕ್ಸೇವಿಯರ್ ಹಾಗೂ ಅಣ್ಣಪ್ಪ ಜತೆಗೂಡಿ ಕಳೆಯುತ್ತಿದ್ದರು. ಮದ್ಯ ಸೇವನೆ ವೇಳೆ ಹಣ ಸಂಪಾದಿಸುವ ಬಗ್ಗೆ ಈ ಸ್ನೇಹಿತರು ಚರ್ಚಿಸುತ್ತಿದ್ದರು.

ಆಗ ಹಿಂದೆ ತಾನು ಕೆಲಸ ಮಾಡುತ್ತಿದ್ದ ಸಿಎಂಎಸ್ ಕಂಪನಿಯು ಎಟಿಎಂಗಳಿಗೆ ಹಣ ಸಾಗಿಸುವಾಗ ಹಣ ದರೋಡೆ ಮಾಡಬಹುದು ಎಂದು ಅಣ್ಣಪ್ಪನಿಗೆ ಕ್ಸೇವಿಯರ್ ಹೇಳಿದ್ದ. ಈ ಸಲಹೆಯನ್ನು ಅಣ್ಣಪ್ಪ ಬೆಂಬಲಿಸಿದ್ದ. ನಂತರ ಈ ಯೋಜನೆಯನ್ನು ಕಾರ್ಯರೂಪಕ್ಕಿಳಿಸಲು ಕ್ಸೇವಿಯರ್ ಮುಂದಾಗಿದ್ದಾನೆ. ಹಣದಾಸೆ ತೋರಿಸಿ ಕಮ್ಮನಹಳ್ಳಿಯ ರವಿ ಹಾಗೂ ಸಿಎಂಎಸ್ ಕಂಪನಿಯ ಉದ್ಯೋಗಿ ಗೋಪಿ ಸೇರಿದಂತೆ ಐವರನ್ನು ದರೋಡೆಗೆ ಆತ ಒಟ್ಟುಗೂಡಿಸಿದ್ದಾನೆ. ಕ್ಸೇವಿಯರ್ ಮೂಲಕ ಇನ್ನುಳಿದ ಆರೋಪಿಗಳು ಅಣ್ಣಪ್ಪನಿಗೆ ಪರಿಚಿತರಾಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಣ್ಣಪ್ಪನಿಂದ ತಾಂತ್ರಿಕ ಮಾಹಿತಿ:

ದರೋಡೆ ಕೃತ್ಯದಲ್ಲಿ ಪೊಲೀಸರ ಕೈ ಸಿಗದೆ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ತಾಂತ್ರಿಕ ಮಾಹಿತಿಯನ್ನು ಅಣ್ಣಪ್ಪ ನೀಡಿದ್ದ. ಇತ್ತ ಸಿಎಂಎಸ್ ಕಂಪನಿಯಲ್ಲಿ ಎಟಿಎಂ ಹಣ ಸಾಗಿಸುವ ವಾಹನಗಳ ಮೇಲುಸ್ತುವಾರಿ ಹೊತ್ತಿದ್ದ ಗೋಪಿ, ಜೆ.ಪಿ.ನಗರದಿಂದ ಗೋವಿಂದಪುರಕ್ಕೆ ಹಣ ಸಾಗಿಸುವ ಮಾರ್ಗ, ವಾಹನ ಹಾಗೂ ಸಿಬ್ಬಂದಿ ಕುರಿತು ಮಾಹಿತಿ ಕೊಟ್ಟಿದ್ದ. ಹೀಗೆ ಮೂರು ತಿಂಗಳು ಎಟಿಎಂ ಹಣ ದೋಚಲು ಆರೋಪಿಗಳು ಪೂರ್ವ ಸಿದ್ಧತೆ ನಡೆಸಿದ್ದರು. ಬಳಿಕ 15 ದಿನಗಳು ಜೆ.ಪಿ.ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ ಶಾಖೆಯಿಂದ ಗೋವಿಂದಪುರ ಮಾರ್ಗದಲ್ಲಿ ಸುತ್ತಾಡಿ ಸರ್ವೇ ಮಾಡಿದ್ದರು. ಆ ರಸ್ತೆಯಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ಹಾಗೂ ಇಲ್ಲ ಎಂಬುದರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದರು.

ಈ ಮುಂಜಾಗ್ರತೆಯಿಂದ ದರೋಡೆ ವೇಳೆ ಆರೋಪಿಗಳು ಮೊಬೈಲ್ ಬಳಸಿಲ್ಲ ಹಾಗೂ ಕೃತ್ಯ ಎಸಗುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳಿರದಂತೆ ಜಾಗೃತೆ ವಹಿಸಿದ್ದರು. ಕೊನೆಗೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿಲ್ಲದ ಜಯನಗರದ ಅಶೋಕ ಪಿಲ್ಲರ್ ಬಳಿ ದರೋಡೆಗೆ ಸ್ಥಳ ನಿಗಪಡಿಸಿ ನ.19 ರಂದು ಮಧ್ಯಾಹ್ನ 12.30 ಗಂಟೆಗೆ ಸಂಚನ್ನು ಕಾರ್ಯರೂಪಕ್ಕಿಳಿಸಿದ್ದರು.

ಒಂದೂವರೆ ಗಂಟೆ ತಡವಾಗಿ ಮಾಹಿತಿ:

ಅಂದು ಮಧ್ಯಾಹ್ನ 12.30 ಗಂಟೆಗೆ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಜಯನಗರದ ಅಶೋಕ ಪಿಲ್ಲರ್ ಸಮೀಪ ಸಿಎಂಎಸ್ ವಾಹನವನ್ನು ದರೋಡೆಕೋರರು ಅಡ್ಡಗಟ್ಟಿದ್ದರು. ಬಳಿಕ ತಾವು ಕಚೇರಿಗೆ ಕರೆದೊಯ್ಯುವುದಾಗಿ ಹೇಳಿ ಇನ್ನೋವಾ ಕಾರಿಗೆ ಸಿಎಂಎಸ್ ವಾಹನದ ಕಸ್ಟೋಡಿಯನ್‌ ಅಫ್ತಾಬ್‌, ಸೆಕ್ಯೂರಿಟಿ ಗಾರ್ಡ್‌ಗಳಾದ ತಮ್ಮಯ್ಯ ಹಾಗೂ ರಾಜುನನ್ನು ಕರೆದುಕೊಂಡು ದರೋಡೆಕೋರರು ತೆರಳಿದ್ದಾರೆ. ಸಿಎಂಎಸ್ ವಾಹನದ ಚಾಲಕ ಬಿನೋದ್ ಕುಮಾರ್ ಪಕ್ಕದಲ್ಲಿ ಮತ್ತೊಬ್ಬ ದರೋಡೆಕೋರ ಕುಳಿತು ಸಾಗಿದ್ದಾನೆ. ಮೊದಲು ಸಿಎಂಎಸ್ ವಾಹನವನ್ನು ಅತಿವೇಗವಾಗಿ ಚಲಾಯಿಸುವಂತೆ ಚಾಲಕನಿಗೆ ಹೇಳಿ ಕರೆದೊಯ್ದಿದ್ದಾರೆ. ಆಗ ಹಿಂದೆ ಬರುತ್ತಿದ್ದ ಇನ್ನೋವಾ ಕಾರು ದಿಕ್ಕು ತಪ್ಪಿದೆ. ನಿಮ್ಹಾನ್ಸ್ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಆ ಮೂವರನ್ನು ಕೆಳಗಿಳಿಸಿದ ದರೋಡೆಕೋರರು, ಅಲ್ಲಿಂದ ಡೇರಿ ಸರ್ಕಲ್‌ ಮೇಲ್ಸೇತುವೆಗೆ ಬಂದಿದ್ದಾರೆ. ಅಷ್ಟರಲ್ಲಿ ಸಿಎಂಎಸ್ ವಾಹನ ಸಹ ಅಲ್ಲಿಗೆ ಬಂದಿದೆ. ಕೂಡಲೇ ಆ ವಾಹನದಲ್ಲಿದ್ದ ಹಣವನ್ನು ತಮ್ಮ ಇನ್ನೋವಾ ಕಾರಿಗೆ ತುಂಬಿಕೊಂಡು ದರೋಡೆಕೋರರು ಪರಾರಿಯಾಗಿದ್ದರು ಎಂದು ಸೀಮಂತ್‌ ಕುಮಾರ್ ಸಿಂಗ್ ವಿವರಿಸಿದ್ದಾರೆ.

ಐದು ಜಿಲ್ಲೆಗಳಲ್ಲಿ ಕಾರ್ಯಾಚರಣೆ

ಕೃತ್ಯದ ಬಗ್ಗೆ ಪೊಲೀಸರಿಗೆ ಒಂದೂವರೆ ತಾಸು ತಡವಾಗಿ ಮಾಹಿತಿ ಸಿಕ್ಕಿತು. ಮೊದಲು ಡಿ.ಜೆ.ಹಳ್ಳಿಯಲ್ಲಿ ದರೋಡೆ ನಡೆದಿದೆ ಎನ್ನಲಾಯಿತು. ಕೂಡಲೇ ಅಲ್ಲಿಗೆ ತೆರಳಿ ಅಧಿಕಾರಿಗಳು ಪರಿಶೀಲಿಸಿದರು. ಒಂದೂವರೆ ತಾಸಿನ ಬಳಿಕ ಡೇರಿ ವೃತ್ತ ಬಳಿ ಎಟಿಎಂ ಹಣ ದರೋಡೆ ನಡೆದಿರುವುದು ಗೊತ್ತಾಯಿತು. ಕೂಡಲೇ ಆರೋಪಿಗಳ ಪತ್ತೆಗೆ ತನಿಖೆ ಶುರುವಾಯಿತು. ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಸಾರಥ್ಯದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ, ಸಿಸಿಬಿ ಡಿಸಿಪಿ ಶ್ರೀಹರಿಬಾಬು ಹಾಗೂ ಜಯನಗರ ಉಪ ವಿಭಾಗದ ಎಸಿಪಿ ನಾರಾಯಣ ಅವರನ್ನೊಳಗೊಂಡ 200 ಕ್ಕೂ ಹೆಚ್ಚಿನ ಪೊಲೀಸರು ಹಗಲಿರುಳು ತನಿಖೆ ನಡೆಸಿದರು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ಆರೋಪಿಗಳಿಗೆ ಹುಡುಕಾಟ ನಡೆಸಲಾಯಿತು. ನೂರಾರು ಮೊಬೈಲ್ ಕರೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಯಿತು. ಸುದ್ದಿಗೋಷ್ಠಿ ನಡೆಯುವ ಹೊತ್ತಿಗೆ ಗೋವಾ ಗಡಿಯಲ್ಲಿ ತನಿಖೆ ತಂಡ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಆರು ಮಂದಿ ಬಂಧನ, ಹಣ ಜಪ್ತಿ:

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಸಮೀಪ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ಹಾಗೂ ಖಾಲಿ ಟ್ರಂಕ್‌ಗಳು ಪತ್ತೆಯಾದವು. ಅಷ್ಟರಲ್ಲಿ ತಾಂತ್ರಿಕ ಮಾಹಿತಿ ಆಧರಿಸಿ ದರೋಡೆ ಸಂಚಿನಲ್ಲಿ ಪಾತ್ರ ವಹಿಸಿದ್ದ ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್‌ ಅಣ್ಣಪ್ಪ ನಾಯಕ್‌, ಸಿಎಂಎಸ್ ಕಂಪನಿ ಉದ್ಯೋಗಿ ಗೋಪಿ ಹಾಗೂ ಕ್ಸೇವಿಯರ್‌ನ್ನು ಬಂಧಿಸಲಾಯಿತು. ಆರೋಪಿಗಳ ಮಾಹಿತಿ ಮೇರೆಗೆ ನಗರ ಹೊರವಲಯದಲ್ಲಿ ಹಣ ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಇನ್ನುಳಿದ ರವಿ, ನೆಲ್ಸನ್ ಹಾಗೂ ನವೀನ್‌ನನ್ನು ಹೈದರಾಬಾದ್‌ನಲ್ಲಿ ಶನಿವಾರ ಸಂಜೆ ಪೊಲೀಸರು ಸೆರೆ ಹಿಡಿದಿದ್ದಾರೆ. ಚಿತ್ತೂರಿನಲ್ಲಿ ತಪ್ಪಿಸಿಕೊಂಡಿದ್ದ ಈ ಮೂವರು, ಅಲ್ಲಿಂದ ಹೋಗಿ ಹೈದರಾಬಾದ್‌ನ ಲಾಡ್ಜ್‌ನಲ್ಲಿ ಅವಿತುಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಅವರನ್ನು ಬಂಧಿಸಿ 53 ಲಕ್ಷ ರು. ಹಣ ವಶಕ್ಕೆ ಪಡೆದಿದ್ದಾರೆ.

---------

5 ಲಕ್ಷ ರು. ಬಹುಮಾನ

ಸಿಎಂಎಸ್ ಕಂಪನಿಯ ಭದ್ರತಾ ಲೋಪವು ಎಟಿಎಂ ಹಣ ದರೋಡೆಗೆ ಅನುಕೂಲವಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಅಧಿಕಾರಿ-ಸಿಬ್ಬಂದಿ ಕಾರ್ಯ ಪ್ರಶಂಸನೀಯವಾಗಿದ್ದು, ತನಿಖಾ ತಂಡಗಳಿಗೆ 5 ಲಕ್ಷ ರು. ನಗದು ಬಹುಮಾನ ನೀಡಲಾಗುತ್ತದೆ.

----

ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ