ಬೆಂಗಳೂರು: ಚಿಕಿತ್ಸೆಗೆ ಬಂದವಳ ಸರ ಕದ್ದ ನರ್ಸ್‌ಗಳು

| Published : Feb 13 2024, 01:45 AM IST / Updated: Feb 13 2024, 09:05 AM IST

Mangalya Chain

ಸಾರಾಂಶ

ಚಿಕಿತ್ಸೆಗಾಗಿ ಬಂದ ಮಹಿಳೆಯ ಚಿನ್ನದ ಮಾಂಗಲ್ಯ ಸರವನ್ನು ಆಸ್ಪತ್ರೆ ಸಿಬ್ಬಂದಿ ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂಡಲಪಾಳ್ಯದ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿಕಿತ್ಸೆಗೆ ಬಂದಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಗೋವಿಂದರಾಜನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಟ್ಟೇಗಾರಪಾಳ್ಯದ ಮುನೇಶ್ವರನಗರ ನಿವಾಸಿ ರಾಜೇಶ್ವರಿ(36) ಎಂಬುವವರು ನೀಡಿದ ದೂರಿನ ಮೇರೆಗೆ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯ ನರ್ಸ್‌ಗಳಾದ ಅಕ್ಷತಾ, ಅದೀನಾ, ಹೌಸ್‌ ಕೀಪಿಂಗ್‌ ಕೆಲಸ ಮಾಡುವ ಪ್ರೇಮಮ್ಮ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?
ದೂರುದಾರರಾದ ರಾಜೇಶ್ವರಿ ಅವರಿಗೆ ಫೆ.8ರ ಮಧ್ಯಾಹ್ನದಿಂದ ಎದೆನೋವು ಕಾಣಿಸಿಕೊಂಡಿದ್ದು, ರಾತ್ರಿ ನೋವು ಹೆಚ್ಚಾಗಿದೆ. ಈ ವೇಳೆ ಪತಿ ವೆಂಕಟೇಶಮೂರ್ತಿ ಅವರು ರಾಜೇಶ್ವರಿ ಅವರನ್ನು ತಡರಾತ್ರಿ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. 

ಈ ವೇಳೆ ವೈದ್ಯರು ಆರೋಗ್ಯ ತಪಾಸಣೆ ಮಾಡಿ, ಇಸಿಜಿ ಮಾಡಿಸಲು ಸೂಚಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ ನರ್ಸ್‌ ಅಕ್ಷತಾ ಅವರು ‘ಇಸಿಜಿ ಮಾಡಬೇಕು. ನಿಮ್ಮ ಮಾಂಗಲ್ಯ ಸರ ತೆಗೆಯರಿ’ ಎಂದು ಹೇಳಿದ್ದಾರೆ.

ಆಗ ರಾಜೇಶ್ವರಿ ಅವರು ಸುಮಾರು ₹2.50 ಲಕ್ಷ ಮೌಲ್ಯದ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಿಚ್ಚಿ ತಮ್ಮ ಪತಿಯ ಕೈಗೆ ನೀಡಲು ಮುಂದಾಗಿದ್ದಾರೆ. 

ಈ ವೇಳೆ ನರ್ಸ್‌ ಅಕ್ಷತಾ ಅವರು ‘ಮಾಂಗಲ್ಯ ಸರವನ್ನು ತಲೆದಿಂಬಿನ ಕೆಳಗೆ ಇರಿಸಿ’ ಎಂದು ಹೇಳಿದ್ದಾರೆ. ಆದರೂ ರಾಜೇಶ್ವರಿ ಅವರು ‘ಪತಿಯ ಕೈಗೆ ಕೊಡುವೆ. ಅವರನ್ನು ಕರೆಯಿರಿ’ ಎಂದಾಗ, ಅಕ್ಷತಾ ಅವರು ದಿಂಬಿನ ಕೆಳಗೆ ಇರಿಸಿ ಎಂದಿದ್ದಾರೆ.

ಆತುರ ಮಾಡಿ ಹೊರಗೆ ಕಳುಹಿಸಿದರು: ರಾಜೇಶ್ವರಿ ಅವರು ಮಾಂಗಲ್ಯ ಸರವನ್ನು ದಿಂಬಿನ ಕೆಳಗೆ ಇರಿಸಿದ್ದಾರೆ. ಬಳಿಕ ಎದೆಗೆ ಜೆಲ್‌ ಹಾಕಿ ಇಸಿಜಿ ಮಾಡಿದ ಅಕ್ಷತಾ ಅವರು ಜೆಲ್‌ ಒರೆಸಿಕೊಂಡು ಹೊರಡಿ ಎಂದು ರಾಜೇಶ್ವರಿ ಅವರನ್ನು ಆತುರಾತುರವಾಗಿ ಹೊರಗೆ ಕಳುಹಿಸಿದ್ದಾರೆ. 

ಈ ವೇಳೆ ನರ್ಸ್‌ ಅದೀನಾ ಸಹ ಅಕ್ಷತಾ ಜತೆಗೆ ಇದ್ದರು. ಬಳಿಕ ರಾಜೇಶ್ವರಿ ಅವರು ಮಾಂಗಲ್ಯ ಸರವನ್ನು ಮರೆತು ಪತಿಯ ಜತೆಗೆ ಮನೆಗೆ ತೆರಳಿದ್ದಾರೆ.ಸ್ನಾನ ಮಾಡುವಾಗ

ಚಿನ್ನದ ಸರ ನೆನಪು: ಚುಚ್ಚುಮದ್ದು ನೀಡಿದ್ದ ಹಿನ್ನೆಲೆಯಲ್ಲಿ ರಾಜೇಶ್ವರಿ ರಾತ್ರಿ ಗಾಢ ನಿದ್ದೆಗೆ ಜಾರಿದ್ದಾರೆ. ಬೆಳಗ್ಗೆ ಎದ್ದು ಸ್ನಾನಕ್ಕೆ ಹೋದಾಗ ಮಾಂಗಲ್ಯ ಸರ ನೆನಪಾಗಿದೆ. 

ಆಸ್ಪತ್ರೆಯಲ್ಲಿ ಇಸಿಜಿ ಮಾಡುವಾಗ ಮಾಂಗಲ್ಯ ಸರವನ್ನು ನರ್ಸ್‌ ಸೂಚನೆ ಮೇರೆಗೆ ದಿಂಬಿನ ಕೆಳಗೆ ಇರಿಸಿದ್ದಾಗಿ ಪತಿಗೆ ಹೇಳಿದ್ದಾರೆ. 

ಬಳಿಕ ದಂಪತಿ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ, ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಜಗಳ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮೂವರ ಮೇಲೆ ಸಂಶಯ: ಇಸಿಜಿ ಮಾಡುವಾಗ ನರ್ಸ್‌ಗಳಾದ ಅಕ್ಷತಾ, ಅದೀನಾ ಹಾಗೂ ಹೌಸ್‌ಕೀಪಿಂಗ್‌ ಪ್ರೇಮಮ್ಮಾ ಅವರು ಇದ್ದರು. 

ಈ ಮೂವರೇ ಮಾಂಗಲ್ಯ ಸರ ಕದ್ದಿರುವ ಅನುಮಾನವಿದೆ. ಹೀಗಾಗಿ ಈ ಮೂವರು ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮಾಂಗಲ್ಯ ಸರ ಹುಡುಕಿ ಕೊಡುವಂತೆ ರಾಜೇಶ್ವರಿ ದೂರಿನಲ್ಲಿ ಕೋರಿದ್ದಾರೆ. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.