ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲೆಕ್ಟ್ರಾನಿಕ್ ಸಿಟಿ ಸಮೀಪ ಫಾರ್ಮ್ ಹೌಸ್‌ನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ತೆಲುಗು ನಟಿ ಹೇಮಾ ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಸೇವನೆ ದೃಢಪಟ್ಟರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವ್ ಪಾರ್ಟಿಯನ್ನು ಆಯೋಜಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿದೆ. ಈಗ ಪಾರ್ಟಿ ಆಯೋಜಿಸಿದ್ದ ಐವರನ್ನು ಬಂಧಿಸಲಾಗಿದೆ ಎಂದರು.
ತಾನು ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲವೆಂದು ತೆಲುಗು ನಟಿ ಹೇಮಾ ವಿಡಿಯೋ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಹೇಮಾ ಪಾರ್ಟಿಯಲ್ಲಿದ್ದರು ಎಂದು ಖಚಿತಪಡಿಸಿದರು.ಡ್ರಗ್ಸ್ ಪೂರೈಕೆದಾರರ ಪತ್ತೆಗೆ ತನಿಖೆ:
ರೇವ್ ಪಾರ್ಟಿ ಆಯೋಜಿಸಿದ್ದ ಐವರನ್ನು ಬಂಧಿಸಲಾಗಿದ್ದು, ಈ ಪಾರ್ಟಿಗೆ ಎಲ್ಲಿಂದ ಡ್ರಗ್ಸ್ ಪೂರೈಕೆಯಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆದಿದೆ. ದಾಳಿ ವೇಳೆ ಡ್ರಗ್ಸ್ ಅನ್ನು ಬಚ್ಚಿಡಲು ಕೆಲವರು ಯತ್ನಿಸಿದ್ದಾರೆ. ಶೌಚಾಲಯ ಹಾಗೂ ಈಜುಕೊಳ ಸೇರಿದಂತೆ ಎಲ್ಲೆಂದರಲ್ಲಿ ಡ್ರಗ್ಸ್ ಬಿಸಾಡಿದ್ದರು ಎಂದು ವಿವರಿಸಿದರು.ನಗರದಲ್ಲಿ ಡ್ರಗ್ಸ್ ಮಾರಾಟದ ಜಾಲದ ಮೇಲೆ ನಿಗಾವಹಿಸಲಾಗಿದೆ. ಈ ದಂಧೆಯಲ್ಲಿ ಪಾಲ್ಗೊಂಡವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಈಗ ರೇವ್ ಪಾರ್ಟಿ ಕುರಿತು ಮಾಹಿತಿ ಕಲೆ ಹಾಕಿ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.ಡ್ರಗ್ಸ್ ಪತ್ತೆಯಲ್ಲಿ ಶ್ವಾನ ದಳ ಮಹತ್ವದ ಕೆಲಸ
ರೇವ್ ಪಾರ್ಟಿ ವೇಳೆ ಡ್ರಗ್ಸ್ ಪತ್ತೆ ಕಾರ್ಯದಲ್ಲಿ ಶ್ವಾನ ದಳವು ಮಹತ್ವದ ಪಾತ್ರವಹಿಸಿದೆ ಎಂದು ಆಯುಕ್ತ ಬಿ.ದಯಾನಂದ್ ಶ್ಲಾಘಿಸಿದರು.ಡ್ರಗ್ಸ್ ಪ್ರಕರಣಗಳಲ್ಲಿ ಶ್ವಾನ ದಳವನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಅಂತೆಯೇ ಈ ರೇವ್ ಪಾರ್ಟಿ ದಾಳಿಯಲ್ಲಿ ಕೂಡ ಶ್ವಾನ ದಳವನ್ನು ಬಳಸಲಾಯಿತು. ಆಗ ಫಾರ್ಮ್ ಹೌಸ್‌ನಲ್ಲಿ ಬಿಸಾಡಿದ್ದ ಡ್ರಗ್ಸನ್ನು ಶ್ವಾನದಳ ಪತ್ತೆ ಹಚ್ಚಿದೆ ಎಂದರು.ಹೆಬ್ಬಗೋಡಿ ಠಾಣೆಗೆ ಕೇಸ್ ವರ್ಗ:
ರೇವ್ ಪಾರ್ಟಿ ಪ್ರಕರಣವನ್ನು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಮುಂದಿನ ತನಿಖೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಮುಂದುವರೆಸಲಿದ್ದಾರೆ ಎಂದು ಆಯುಕ್ತರು ಹೇಳಿದರು.ಈ ಮೊದಲು ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿದೆ ಎಂದು ಭಾವಿಸಿ ಸಿಸಿಬಿ ದಾಳಿ ನಡೆಸಿತ್ತು. ಬಳಿಕ ವಿಚಾರಣೆ ವೇಳೆ ಆ ಫಾರ್ಮ್ ಹೌಸ್ ಹೆಬ್ಬಗೋಡಿ ಠಾಣಾ ಸರಹದ್ದಿಗೆ ಬರುವುದು ಗೊತ್ತಾಯಿತು. ಹೀಗಾಗಿ ಸದ್ಯ ಪ್ರಕರಣವನ್ನು ಆ ಠಾಣೆಗೆ ವರ್ಗಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿಸಿಬಿಗೆ ಮತ್ತೆ ಪ್ರಕರಣದ ತನಿಖೆ ನೀಡಿದರೆ ನಡೆಸುತ್ತೇವೆ ಎಂದು ತಿಳಿಸಿದರು.
ರೇವ್ ಪಾರ್ಟಿ ದಾಳಿ ವೇಳೆ ಯಾರೊಬ್ಬರು ಚುನಾಯಿತ ಪ್ರತಿನಿಧಿಗಳಿರಲಿಲ್ಲ. ದಾಳಿ ವೇಳೆ ಪತ್ತೆಯಾದ ಶಾಸಕರ ವಾಹನ ಪಾಸ್ ಬಗ್ಗೆ ತನಿಖೆ ನಡೆಸಲಾಗುತ್ತದೆ.-ಬಿ.ದಯಾನಂದ್, ಪೊಲೀಸ್ ಆಯುಕ್ತ.
ಮಾದಕ ವಸ್ತು ಮುಕ್ತ ರಾಜ್ಯ ನಮ್ಮ ಉದ್ದೇಶ: ಪರಮೇಶ್ವರ್ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲಿನ ದಾಳಿಯಲ್ಲಿ ಡ್ರಗ್ಸ್, ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ. ರಾಜ್ಯವನ್ನು ಮಾದಕ ವಸ್ತು ಮುಕ್ತ ಮಾಡಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ ಇಂತಹ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ರಾಜ್ಯಾದ್ಯಂತ ಸಾವಿರಾರು ಕೋಟಿ ಡ್ರಗ್ಸ್ ಹಿಡಿದ್ದೇವೆ. ಡ್ರಗ್ಸ್ ಪೂರೈಕೆ ಹತ್ತಿಕ್ಕುವ ಕೆಲಸ ಆಗುತ್ತಿದೆ. ಹೇಗೆಲ್ಲಾ ಡ್ರಗ್ಸ್ ಪೂರೈಕೆ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿಂದಲೇ ಮಟ್ಟ ಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಕರಣದಲ್ಲೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ದಾಳಿ ವೇಳೆ ರೇವ್ ಪಾರ್ಟಿ ನಡೆಯುತ್ತಿದ್ದದ್ದು ಸತ್ಯ. ಯಾವೆಲ್ಲಾ ವ್ಯಕ್ತಿಗಳು ಭಾಗವಹಿಸಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಹೊರ ರಾಜ್ಯದಿಂದ ಗಾಂಜಾ ಸೇರಿ ಮಾದಕ ವಸ್ತುಗಳು ಹೇಗೆ ಬರುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ಪ್ರತ್ಯೇಕ ಘಟಕ ಮಾಡಿದ್ದೇವೆ ಎಂದು ಹೇಳಿದರು.ಇನ್ನು ಡ್ರಗ್ಸ್ ದಂಧೆ ಬಗ್ಗೆ ಮಾತನಾಡಿದ ಅವರು, ಕೆಲವು ನಿರ್ದಿಷ್ಟ ದೇಶದವರು ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಬಂದು ಪೆಡ್ಲರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ನಿಗಾ ಇಟ್ಟಿದ್ದೇವೆ. ಅವರ ದೇಶದ ಎಂಬಸ್ಸಿಗೂ ರಿಪೋರ್ಟ್ ಮಾಡುತ್ತಿದ್ದೇವೆ. ಇದನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದರು.