ಮಹಿಳೆಯ ಮುಂದೆ ಮೆಟ್ರೋ ನೌಕರ ಅಸಭ್ಯ ವರ್ತನೆ: ಅಮಾನತು, ತನಿಖೆ

| Published : Mar 21 2024, 01:47 AM IST / Updated: Mar 21 2024, 09:18 AM IST

ಸಾರಾಂಶ

ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಎದುರು ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಈ ಸಂಬಂಧ ತನಿಖೆ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಎದುರು ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಈ ಸಂಬಂಧ ತನಿಖೆ ಕೈಗೊಂಡಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ ನಲ್ಲಿ ಮಹಿಳೆಯೊಬ್ಬರು ಪೋಸ್ಟ್‌ ಮಾಡಿದ್ದು, ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್‌ ಖಾಸಗಿ ಅಂಗದ ಬಳಿ ಕೈ ಇಟ್ಟುಕೊಂಡ ದೃಶ್ಯ ಅಸ್ಪಷ್ಟವಾಗಿದೆ. ವಿಡಿಯೋ ಜೊತೆ ಬರೆದಿರುವ ಮಹಿಳೆ, ‘ಪ್ಲಾಟ್‌ಫಾರ್ಮ್‌ ಎದುರು ಮೆಟ್ರೋ ಸಿಬ್ಬಂದಿ ಖಾಸಗಿ ಅಂಗ ಸ್ಪರ್ಶಿಸಿಕೊಂಡು ದುರ್ವರ್ತನೆ ತೋರಿದ್ದಾನೆ. ಕೆಲ ಹೊತ್ತು ಆತ ನನ್ನನ್ನು ದಿಟ್ಟಿಸಿ ನೋಡಿದ. ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಲವು ಸನ್ನೆಗಳನ್ನು ಮಾಡುತ್ತ ನೋಡುತ್ತಿದ್ದ. ನಾನು ವಿಡಿಯೋ ಮಾಡಲು ಆರಂಭಿಸಿದ ತಕ್ಷಣ ಅಲ್ಲಿಂದ ಹೊರಟು ಹೋದ’ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಮೆಟ್ರೋ ಮೇಲಧಿಕಾರಿಗಳಿಗೆ ಮಹಿಳೆ ಸಾಮಾಜಿಕ ಜಾಲತಾಣ ಮತ್ತು ಇ-ಮೇಲ್ ಮೂಲಕ ದೂರು ನೀಡಿದ್ದನ್ನು ತಿಳಿಸಿದ್ದಾರೆ. ಜೊತೆಗೆ ಪೊಲೀಸರೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಾನು ಇಲ್ಲಿ ಸುರಕ್ಷಿತಳಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ಉಲ್ಲೇಖಿಸಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು, ಮಹಿಳೆಯರ ದೂರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆಂತರಿಕ ತನಿಖೆಯನ್ನು ನಡೆಸಲಾಗುತ್ತಿದೆ. ಸೆಕ್ಯೂರಿಟಿ ವಾರೆ ಕಣ್ಣಿನ ಸಮಸ್ಯೆ ಹೊಂದಿದ್ದು, ಈ ಕಾರಣ ಮಹಿಳೆಗೆ ಅಸಭ್ಯ ವರ್ತನೆ ಎಂದು ತೋರಿರುವ ಸಾಧ್ಯತೆ ಇದೆ. ಆತನನ್ನು ಅಮಾನತಿನಲ್ಲಿ ಇಟ್ಟಿದ್ದು, ತನಿಖೆ ಕೈಗೊಂಡು ಸತ್ಯಾಸತ್ಯತೆ ಕಂಡುಕೊಳ್ಳಲಿದ್ದೇವೆ. ಮಹಿಳೆಯರ ಸುರಕ್ಷತೆ ಬಿಎಂಆರ್‌ಸಿಎಲ್‌ ಕರ್ತವ್ಯವಾಗಿದೆ ಎಂದು ತಿಳಿಸಿದೆ.

ಇತ್ತೀಚೆಗೆ ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಜತೆ ಅಸಭ್ಯ ವರ್ತನೆ ತೋರಿದವರಿಂದ ₹10 ಸಾವಿರ ದಂಡ ವಸೂಲಿ ಮಾಡುವ ನಿಯಮಾವಳಿ ರೂಪಿಸಿದೆ. ಸದ್ಯ ಭದ್ರತಾ ಸಿಬ್ಬಂದಿ ಮೇಲೆಯೇ ಈ ಆರೋಪ ಬಂದಿದೆ.