ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮದ್ದೂರು ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆದಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿ ಪ್ರದೀಪ್ ಕುಮಾರ್ ಜಾದವ್ ಮತ್ತು ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ನಡುವೆ ವಿಚಾರಣೆ ವೇಳೆ ತೀವ್ರ ವಾಗ್ವಾದ ನಡೆದಿದೆ.
- ಯು.ಸಿ.ಶಿವಕುಮಾರ್, ಜಾಧವ್ ನಡುವೆ ಬಿರುಸಿನ ಮಾತಿನ ಚಕಮಕಿ
- ಇಬ್ಬರ ವಾಗ್ವಾದ ಕಂಡು ಬೆಚ್ಚಿಬಿದ್ದ ಖಾಕಿ ಪಡೆ, ಠಾಣೆ ಮುಂದೆ ಸೇರಿದ ಜನ- ಠಾಣೆ ಕಿಟಕಿ ಬಾಗಿಲು ಹಾಕಿಕೊಂಡು ವಿಚಾರಣೆ ಕನ್ನಡಪ್ರಭ ವಾರ್ತೆ ಮಂಡ್ಯ
ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮದ್ದೂರು ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆದಿರುವುದಾಗಿ ತಿಳಿದು ಬಂದಿದೆ.ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿ ಪ್ರದೀಪ್ ಕುಮಾರ್ ಜಾದವ್ ಮತ್ತು ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ನಡುವೆ ವಿಚಾರಣೆ ವೇಳೆ ತೀವ್ರ ವಾಗ್ವಾದ ನಡೆದಿದ್ದು, ಇಬ್ಬರ ನಡುವಿನ ಮಾತಿನ ಕದನಕ್ಕೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ವಿಚಾರಣೆ ವೇಳೆ ಇಬ್ಬರ ಮಾತಿನ ಭರಾಟೆ ಜೋರಾಗಿ ನಡೆಯುತ್ತಿರುವುದನ್ನು ಕೇಳಿಸಿಕೊಂಡ ಜನರು ಠಾಣೆ ಎದುರು ಜಮಾಯಿಸಿದ್ದು, ತಕ್ಷಣವೇ ಎಚ್ಚೆತ್ತ ಪೊಲೀಸರು ಠಾಣೆ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ವಿಚಾರಣೆ ಮುಂದುವರೆಸಿದರು ಎಂದು ಹೇಳಲಾಗಿದೆ.ಪ್ರದೀಪ್ ಕುಮಾರ್ ಜಾದವ್ ಅವರು ಹಾಲಿನ ಪುಡಿ ಕಲಬೆರೆಕೆ ಪ್ರಕರಣದಲ್ಲಿ ಯು.ಸಿ.ಶಿವಕುಮಾರ್ ಪಾತ್ರವನ್ನು ವಿವರಿಸುವ ವೇಳೆ ರೊಚ್ಚಿಗೆದ್ದ ಶಿವಕುಮಾರ್ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಬೇಡ. ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ. ಎಲ್ಲವನ್ನು ನೀನೆ ಮಾಡಿ ಈಗ ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿದ್ದೀಯಾ. ಫೋನ್ ಆಡಿಯೋದಲ್ಲಿ ಬಾಯಿಗೆ ಬಂದಂತೆಲ್ಲ ಮಾತನಾಡಿದ್ದೀಯಾ ಎಂದು ಏಕವಚನದಲ್ಲೇ ಜಾದವ್ ಅವರನ್ನು ನಿಂದಿಸಲು ಆರಂಭಿಸಿದ್ದರು ಎಂದು ಹೇಳಲಾಗಿದೆ.
ಇದಕ್ಕೆ ಜಾಧವ್, ನಾನೇಕೆ ಸುಳ್ಳು ಹೇಳಲಿ. ಪ್ರತಿಯೊಂದಕ್ಕೂ ನನ್ನ ಬಳಿ ಸಾಕ್ಷಿ ಇದೆ. ಎಲ್ಲವನ್ನು ಬಿಚ್ಚಿಡಲ್ಲೂ ನಾನು ಸಿದ್ದನಿದ್ದೇನೆ. ನೀವು ಮಾಡಿರುವ ಕೆಲಸಕ್ಕೆ ಇಂದು ನಾನು ಸಿಕ್ಕಿ ಹಾಕಿಕೊಂಡಿದ್ದೇನೆ. ಕೆಲಸದಿಂದ ಸಸ್ಪೆಂಡ್ ಆಗಿದ್ದೇನೆ. ನನ್ನ ಹೆಂಡತಿ ಮಕ್ಕಳು ಗೋಲಿಡುತ್ತಿದ್ದಾರೆ. ಕೆಲಸ ಕಳೆದುಕೊಂಡು ಜೈಲು ಸೇರುವಂತಾಗಿದೆ ಎಂದು ಏರು ಧ್ವನಿಯಲ್ಲಿ ಅಳಲು ತೋಡಿಕೊಂಡರು ಎನ್ನಲಾಗಿದೆ.ಇಷ್ಟೆಲ್ಲಾ ಆದ ಮೇಲೆ ನಾನೇಕೆ ಸುಳ್ಳು ಹೇಳಲಿ. ಈಗ ಸತ್ಯವನ್ನು ಹೇಳದಿದ್ದರೆ ನಾನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅದರಿಂದ ನನ್ನ ಜೀವನ ಹಾಳಾಗಲಿದೆ. ಅದಕ್ಕಾಗಿ ಎಲ್ಲವನ್ನೂ ಪೊಲೀಸರ ಎದುರು ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದೇನೆ ಎಂದು ಜಾದವ್ ತಿಳಿಸಿದ್ದಾಗಿ ಗೊತ್ತಾಗಿದೆ.
ಇದರಿಂದ ಕೋಪಗೊಂಡ ಶಿವಕುಮಾರ್, ನನ್ನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸುವ ಪ್ರಯತ್ನ ಮಾಡುತ್ತಿದ್ದೀಯಾ. ಗೋದಾಮು ಉಸ್ತುವಾರಿ ವಹಿಸಿಕೊಂಡಿದ್ದವನು ನೀನು. ಹಾಲಿನ ಪುಡಿ ಕಲಬೆರಕೆಯಾಗುವುದಕ್ಕೆ ಮತ್ತು ನಾಪತ್ತೆಯಾಗುವುದಕ್ಕೂ ನೀನೇ ಕಾರಣ. ಸುಮ್ಮನೆ ನಿಜ ಒಪ್ಪಿಕೋ. ಇದರಲ್ಲಿ ನನ್ನನ್ನೇಕೆ ಎಳೆದು ತರುತ್ತೀಯಾ ಎಂದು ಹೇಳಿದ ಧ್ವನಿಯಲ್ಲಿ ಪ್ರಶ್ನಿಸಿದರು ಎಂದು ಹೇಳಲಾಗಿದೆ.ಇದೇ ರೀತಿ ಒಬ್ಬರಿಗೊಬ್ಬರ ನಡುವೆ ಬಿರುಸಿನ ಮಾತುಕತೆ ಪೊಲೀಸರ ಎದುರಿನಲ್ಲಿ ಹಲವು ಸಮಯಗಳ ಕಾಲ ನಡೆಯಿತು. ಇಬ್ಬರನ್ನು ಸಮಾಧಾನ ಪಡಿಸಲು ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಯಿತು. ಠಾಣೆಯೊಳಗೆ ಇವರಿಬ್ಬರ ನಡುವೆ ನಡೆಯುತ್ತಿದ್ದ ಮಾತಿನ ಕದನ ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಕೇಳಿಸಲಾರಂಬಿಸಿತು. ಕುತೂಹಲದಿಂದ ಜನರು ಠಾಣೆ ಎದುರು ಸೇರಲಾರಂಭಿಸಿದರು.
ಜನ ಸೇರುವುದನ್ನು ಕಂಡ ಪೊಲೀಸರು ಕೂಡಲೇ ಎಚ್ಚೆತ್ತು ಠಾಣೆ ಕಿಟಕಿ ಬಾಗಿಲುಗಳನ್ನು ಮುಚ್ಚಿ ಒಳಗೆ ವಿಚಾರಣೆ ಮುಂದುವರಿಸಿದ್ದರು. ಆದರೂ ಬಹಳ ಹೊತ್ತಿನವರೆಗೆ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರೆದಿತ್ತು ಎಂದು ಗೊತ್ತಾಗಿದೆ.ಜಾದವ್ ಮತ್ತು ನಿರ್ದೇಶಕ ದಾಲು ರವಿ ನಡುವೆ ನಡೆದ ಫೋನ್ ಸಂಭಾಷಣೆ ವಿಚಾರವೂ ವಿಚಾರಣೆ ವೇಳೆ ಪ್ರಸ್ತಾಪಗೊಂಡಿದ್ದು, ತಮ್ಮ ವಿರುದ್ಧ ಏಕವಚನದಲ್ಲಿ ಮತ್ತು ಆವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆಯೂ ಯು ಸಿ ಶಿವಕುಮಾರ್ ಅಧಿಕಾರಿ ಜಾದವ್ ವಿರುದ್ಧ ಹರಿಹಾಯ್ದಿದ್ದಾಗಿ ತಿಳಿದು ಬಂದಿದೆ.
ಪ್ರಕರಣದಲ್ಲಿ ಆರೋಪಿಯಾಗಿ ಹಲವು ದಿನಗಳ ಹಿಂದೆ ಜೈಲು ಪಾಲಾಗಿದ್ದ ಪ್ರದೀಪ್ ಕುಮಾರ್ ಜಾದವ್ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಈ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಯು ಸಿ ಶಿವಕುಮಾರ್ ಪಾತ್ರವಿರುವ ಬಗ್ಗೆ ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರನ್ನೂ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಾಗುತ್ತಿದೆ.