ಹಾಲಿನ ಪುಡಿ ಕಲಬೆರಕೆ ಹಗರಣ 100 ಕೋಟಿ ರು. ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು.ಇದರಲ್ಲಿ ಭಾಗಿಯಾದ ಭ್ರಷ್ಟ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ತಕ್ಷಣವೇ ರದ್ದು ಪಡಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಹಾಲಿನ ಪುಡಿ ಕಲಬೆರಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಹಾಲು ಉತ್ಪಾದಕರ ಹೋರಾಟ ಸಮಿತಿ ಕಾರ್ಯಕರ್ತರು ಶನಿವಾರ ತಾಲೂಕಿನ ಗೆಜ್ಜಲಗೆರೆ ಮನ್ಮುಲ್ ಒಕ್ಕೂಟದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.ಹೋರಾಟ ಸಮಿತಿ ಮುಖಂಡರಾದ ಸುನಂದಾ ಜಯರಾಂ ನೇತೃತ್ವದಲ್ಲಿ ತಾಲೂಕಿನ ಗೆಜ್ಜಲಗೆರೆ, ಸಾದೊಳಲು, ವಳಗೆರೆಹಳ್ಳಿ, ಕುದುರಗುಂಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಹೈನುಗಾರಿಕೆ ಹಾಗೂ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂಭಾಗದಿಂದ ಪಾದಯಾತ್ರೆ ಮನ್ಮುಲ್ ಗೆ ಆಗಮಿಸಿ ಒಕ್ಕೂಟದ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು‌.

ರಾಜ್ಯ ಸರ್ಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲಕ್ಷ್ಮಣ್ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಆಡಳಿತ ಮಂಡಳಿ, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಪ್ರತಿಭಟನಾಕಾರರು ಆಡಳಿತ ಮಂಡಳಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಲು ಮುಂದಾದರು. ನಂತರ ಸುತ್ತುವರೆದ ಪೊಲೀಸರು ಮುಖ್ಯ ಪ್ರವೇಶದ್ವಾರದಲ್ಲಿಯೇ ತಡೆದು ಪ್ರತಿಭಟನೆಗೆ ಅವಕಾಶ ಕೊಟ್ಟರು.

ಈ ನಡುವೆ ರೈತ ನಾಯಕಿ ಸುನಂದಾ ಜಯರಾಂ ಹಾಗೂ ಹೋರಾಟ ಸಮಿತಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದಂತ ಸುನಂದಾ ಜಯರಾಂ ಜಿಲ್ಲಾಧಿಕಾರಿ, ಮನ್ಮುಲ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಚೇರಿಯಲ್ಲಿ ನಡೆದಿರುವ ಕೋಟ್ಯಂತರ ರು. ಹಾಲಿನ ಪುಡಿ ಹಗರಣದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಹಾಲಿನ ಪುಡಿ ಕಲಬೆರಕೆ ಹಗರಣ 100 ಕೋಟಿ ರು. ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು.ಇದರಲ್ಲಿ ಭಾಗಿಯಾದ ಭ್ರಷ್ಟ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ತಕ್ಷಣವೇ ರದ್ದು ಪಡಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಹಾಲು ಒಕ್ಕೂಟದಲ್ಲಿ ಒಂದಾದ ಮೇಲೆ ಒಂದರಂತೆ ಹಗರಣಗಳು ನಡೆಯುತ್ತಿವೆ. ಈ ಹಿಂದೆ ಹಾಲು - ನೀರು ಹಗರಣ, ನೇಮಕಾತಿ, ಕಾನೂನು ಬಾಹಿರ ಆಡಳಿತ ಈ ಎಲ್ಲಾ ಹಗರಣಗಳ ಸತ್ಯಾ ಸತ್ಯತೆ ಹೊರ ಬರಬೇಕಾದರೆ ಸಿಬಿಐ ತನಿಖೆಯಿಂದ ಮಾತ್ರ ಎಂದು ಆಗ್ರಹಿಸಿದರು.

ಈಗಾಗಲೇ ಟ್ಯಾಂಕರ್ ಹಗರಣವನ್ನು ಸಿಐಡಿ ತನಿಖೆಗೆ ವಹಿಸಿ 4 ವರ್ಷಗಳಾಗಿವೆ ಆದರೆ, ಇಲ್ಲಿಯವರೆಗೂ ತನಿಖೆ ಮುಗಿದು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೇ, ತನಿಖೆಯನ್ನು ಹಳ್ಳ ಹಿಡಿಸುವ ಅನುಮಾವಿದೆ. ಈ ಕೂಡಲೇ ಎಲ್ಲಾ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕುದುರಗುಂಡಿ ನಾಗರಾಜ್, ಜಯರಾಂ, ಮೋಹನ್, ವೀರೇಶ್, ಪ್ರಭು, ಶಂಕರ್, ರಾಮಲಿಂಗಯ್ಯ, ರವಿ ಹಾಗೂ ಹಾಲು ಉತ್ಪಾದಕರ ಹೋರಾಟ ಸಮಿತಿ ಕಾರ್ಯಕರ್ತರು ಇದ್ದರು.