ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

| N/A | Published : Sep 16 2025, 12:03 AM IST

ಸಾರಾಂಶ

ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ದೂರು ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆ ಬಳಿ ಸೋಮವಾರ ಮಧ್ಯಾಹ್ನ ಜರುಗಿದೆ. ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗೊಲ್ಲರಕೊಪ್ಪಲು ಗ್ರಾಮದ ದೀಪಕ್ ಮೃತಪಟ್ಟವರು.

 ಮದ್ದೂರು : ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆ ಬಳಿ ಸೋಮವಾರ ಮಧ್ಯಾಹ್ನ ಜರುಗಿದೆ.

ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗೊಲ್ಲರಕೊಪ್ಪಲು ಗ್ರಾಮದ ದೀಪಕ್ (21) ಮೃತಪಟ್ಟವರು.

ದೀಪಕ್ ತಮ್ಮ ಸಂಬಂಧಿಕರ ಯುವತಿಯನ್ನು ಮದ್ದೂರು ತಾಲೂಕು ಸೋಮನಹಳ್ಳಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ರೀಡಾಕೂಟಕ್ಕೆ ಗೊಲ್ಲರಕೊಪ್ಪಲು ಗ್ರಾಮದಿಂದ ಬೈಕ್‌ನಲ್ಲಿ ಕರೆತಂದು ಬಿಟ್ಟು ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದನು. ಎಪಿಎಂಸಿ ಎಳನೀರು ಮಾರುಕಟ್ಟೆ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಧ್ಯಾಹ್ನ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬೈಕ್‌ನ್ನು ಎಡಕ್ಕೆ ತಿರುಗಿಸಿದಾಗ ಹಿಂದಿನಿಂದ ಬರುತ್ತಿದ್ದ ಹಾಲಿನ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆದು ದೀಪಕ್ ದೇಹದ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಅಸು ನೀಗಿದ್ದಾನೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಹಾಲಿನ ಟ್ಯಾಂಕರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read more Articles on