ಠಾಣೆಯಲ್ಲಿ ಪಿಸ್ತೂಲ್‌ ಪರಿಶೀಲಿಸುವಾಗ ಮಿಸ್‌ ಫೈಯರ್‌: ಪೇದೆ ಕಾಲಿಗೆ ಗಾಯ

| Published : Mar 26 2024, 02:25 PM IST / Updated: Mar 26 2024, 02:26 PM IST

ಠಾಣೆಯಲ್ಲಿ ಪಿಸ್ತೂಲ್‌ ಪರಿಶೀಲಿಸುವಾಗ ಮಿಸ್‌ ಫೈಯರ್‌: ಪೇದೆ ಕಾಲಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಜಮೆ ಮಾಡಿದ್ದ ಪರವಾನಗಿ ಪಿಸ್ತೂಲ್‌ ಪರಿಶೀಲನೆ ವೇಳೆ ಆಕಸ್ಮಿಕವಾಗಿ ಗುಂಡು ಹಾರಿರುವ ಘಟನೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಜಮೆ ಮಾಡಿದ್ದ ಪರವಾನಗಿ ಪಿಸ್ತೂಲ್‌ ಪರಿಶೀಲನೆ ವೇಳೆ ಆಕಸ್ಮಿಕವಾಗಿ ಗುಂಡು ಹಾರಿರುವ ಘಟನೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ನಡೆದಿರುವ ಈ ಘಟನೆಯಲ್ಲಿ ಠಾಣಾ ಬರಹಗಾರ ಅಂಬುದಾಸ್‌ ರಾಥೋಡ್‌ ಅವರ ಎಡಗಾಲಿಗೆ ಒಂದು ಗುಂಡು ಹೊಕ್ಕಿ ಗಾಯಗೊಂಡಿದ್ದಾರೆ. ಸದ್ಯ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:

ಮುಕುಂದರೆಡ್ಡಿ ಎಂಬುವವರು ಪೊಲೀಸ್‌ ಠಾಣೆಗೆ ಬಂದು ತಮ್ಮ ಪರವಾನಗಿ ಪಿಸ್ತೂಲ್‌ ಅನ್ನು ಜಮೆ ಮಾಡಿದ್ದಾರೆ. ಈ ವೇಳೆ ಮ್ಯಾಗಜೀನ್‌ನಲ್ಲಿ ಗುಂಡುಗಳು ಇಲ್ಲ ಎಂದು ಹೇಳಿದ್ದಾರೆ. ಕಾನ್‌ಸ್ಟೇಬಲ್‌ ವೆಂಕಣ್ಣ ಆ ಪಿಸ್ತೂಲ್‌ ತೆಗೆದು ಪರಿಶೀಲನೆ ಮಾಡುವಾಗ ಏಕಾಏಕಿ ಆಕಸ್ಮಿಕವಾಗಿ ಗುಂಡು ಹಾರಿದೆ. ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾ ಬರಹಗಾರ ಅಂಬುದಾಸ್‌ ರಾಥೋಡ್‌ಗೆ ಎಡಗಾಲಿಗೆ ಆ ಗುಂಡು ಬಿದ್ದಿದೆ. ಗಾಯಗೊಂಡು ಕುಸಿದು ಬಿದ್ದ ಅಂಬುದಾಸ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆ.ಗುಂಡು ಹಾರಿದ್ದು ಹೇಗೆ?

ಮ್ಯಾಗ್‌ಜೀನ್‌ನಲ್ಲಿ ಗುಂಡು ಇಲ್ಲ ಎಂದಿರುವಾಗ ಗುಂಡು ಹೇಗೆ ಹಾರಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಪಿಸ್ತೂಲ್‌ ಮಾಲೀಕ ಮುಕುಂದರೆಡ್ಡಿ ಸರಿಯಾಗಿ ಮ್ಯಾಗ್‌ಜೀನ್‌ ಪರಿಶೀಲಿಸದೇ ಇರಬಹುದು ಅಥವಾ ಪಿಸ್ತೂಲ್‌ ಒಳಗೆ ಒಂದು ಗುಂಡು ಉಳಿದುಕೊಂಡಿರಬಹುದು. ಕಾನ್ಸ್‌ಟೇಬಲ್‌ ವೆಂಕಣ್ಣ ಪಿಸ್ತೂಲ್‌ ಪರಿಶೀಲನೆ ವೇಳೆ ಟ್ರಿಗರ್‌ ಒತ್ತಿದಾಗ ಗುಂಡು ಹೊರ ಬಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.