ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ: ಹೈಕೋರ್ಟ್‌ ಕಳವಳ

| Published : Jun 18 2024, 12:47 AM IST / Updated: Jun 18 2024, 04:51 AM IST

ಸಾರಾಂಶ

ವಿವಾಹಿತ ಮಹಿಳೆ ಮೇಲೆ ಪತಿ ಮತ್ತವರ ಸಂಬಂಧಿಕರು ಕ್ರೌರ್ಯ ಅಪರಾಧ ಎಸಗುವುದನ್ನು ತಡೆಯುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 498(ಎ)ರ ದುರುಪಯೋಗ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅಂತಹ ಪ್ರಕರಣಗಳನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

  ಬೆಂಗಳೂರು :  ವಿವಾಹಿತ ಮಹಿಳೆ ಮೇಲೆ ಪತಿ ಮತ್ತವರ ಸಂಬಂಧಿಕರು ಕ್ರೌರ್ಯ ಅಪರಾಧ ಎಸಗುವುದನ್ನು ತಡೆಯುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 498(ಎ)ರ ದುರುಪಯೋಗ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅಂತಹ ಪ್ರಕರಣಗಳನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯ ಆರೋಪದ ಮೇಲೆ ಸೊಸೆ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ತುಮಕೂರಿನ ಸಿ.ಬಿ.ಪ್ರಕಾಶ್ ಹಾಗೂ ಅವರ ಪತ್ನಿ ಎಸ್.ಬಿ.ತ್ರಿವೇಣಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯಪಟ್ಟಿದೆ.

ಅನಗತ್ಯವಾಗಿ ಪತಿಯ ಕುಟುಂಬದವರನ್ನು ಅಪರಾಧ ಕೃತ್ಯದ ಜಾಲಕ್ಕೆ ಸಿಲುಕಿಸುವಂತಹ ಪ್ರಕರಣ ಮುಂದುವರಿಯಲು ಅನುಮತಿಸಿದರೆ ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ತಿಳಿಸಿರುವ ಹೈಕೋರ್ಟ್‌, ಪ್ರಕರಣದಲ್ಲಿ ದೂರುದಾರ ಮಹಿಳೆಯು ಪತಿ ಮತ್ತವರ ಕುಟುಂಬದವರ (ಅರ್ಜಿದಾರರ) ಮೇಲೆ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರರ ಪುತ್ರ ಚಿದಾನಂದ ಮತ್ತು ಬೆಂಗಳೂರಿನ ಯಲಹಂಕದ ಮಹಿಳೆ ಡಿ.ಎಸ್.ಮೇಘನಾ 2021ರ ಅ.24ರಂದು ಮದುವೆಯಾಗಿದ್ದರು. ಮದುವೆಯಾದ ಎರಡು ತಿಂಗಳಿಗೆ ಪತಿ ಕೆಲಸದ ಸಲುವಾಗಿ ಜರ್ಮನಿಗೆ ತೆರಳಿದ್ದರು. ವೀಸಾ ಸಂಬಂಧ ಪತಿ-ಪತ್ನಿ ನಡುವೆ ಮನಸ್ತಾಪ ಉಂಟಾಗಿತ್ತು. ಬಳಿಕ ಪತಿ-ಪತ್ನಿ ನಡುವೆ ಸಂಬಂಧ ಹದಗೆಟ್ಟಿತ್ತು, ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಪತಿ ಹಾಗೂ ಅತ್ತೆ-ಮಾವನ ವಿರುದ್ಧ 2022ರ ಮೇ.10ರಂದು ತುಮಕೂರು ಪೊಲೀಸ್ ಠಾಣೆಯಲ್ಲಿ ಮೇಘನಾ ಅವರು ಐಪಿಸಿ ಸೆಕ್ಷನ್‌ 498ರ ಅಡಿಯಲ್ಲಿ ದೂರು ಸಲ್ಲಿಸಿ, ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ಮಾಡಿದ್ದರು.

ಪೊಲೀಸರು ತನಿಖೆ ನಡೆಸಿ ಪತಿಯ ವಿರುದ್ಧದ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಎರಡನೇ ಹಾಗೂ ಮೂರನೇ ಆರೋಪಿಯಾಗಿದ್ದ ಅರ್ಜಿದಾರರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿ ಹೈಕೋರ್ಟ್‌, ಅರ್ಜಿದಾರರು ದೂರುದಾರ ಮಹಿಳೆಯ ಪತಿಯ ತಂದೆ ಮತ್ತು ತಾಯಿಯಾಗಿದ್ದಾರೆ. ಅವರನ್ನು ಐಪಿಸಿ ಸೆಕ್ಷನ್‌ 498(ಎ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್‌ 4 ಮತ್ತ 5ರ ಅಡಿಯ ಅಪರಾಧ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಅವರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ. ಅತ್ತೆ ಹಾಗೂ ಮಾವನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ದೂರುದಾರೆ ವಿಫಲರಾಗಿದ್ದಾರೆ. ಹಾಗಾಗಿ, ಅವರ ವಿರುದ್ಧ ಪ್ರಕರಣ ಮುಂದುವರಿಸುವುದು ಕಾನೂನಿನ ಉಲ್ಲಂಘನೆ ಮತ್ತು ದುರ್ಬಳಕೆಯಾಗುತ್ತದೆ ಎಂದು ಹೇಳಿದೆ.

ಆತಂಕ ವ್ಯಕ್ತಪಡಿಸಿದರೂ ಮರುಕಳಿಸುತ್ತಿರುವ ಕೇಸ್‌

ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 498(ಎ) ದುರ್ಬಳಕೆ ಆಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಹಿಂದೆ ಇಂತಹ ದುರ್ಬಳಕೆ ಬಗ್ಗೆ ಹಲವು ಬಾರಿ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಇಷ್ಟಾದರೂ ಇಂತಹ ಪ್ರಕರಣಗಳು ಮರು ಕಳಿಸುತ್ತಲೇ ಇವೆ. ಪತಿಯನ್ನಲ್ಲದೇ ಅವರ ಕುಟುಂಬದವರನ್ನೂ ಸಹ ಅನಗತ್ಯವಾಗಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳದಿದ್ದರೆ ಕಾನೂನು ದುರುಪಯೋಗ ಹೆಚ್ಚುತ್ತಲೇ ಇರುತ್ತದೆ. ಅವುಗಳನ್ನು ಬುಡಸಮೇತ ಕಿತ್ತು ಹಾಕಬೇಕು. ವಿವಾಹಿತ ಮಹಿಳೆ ಈ ಐಪಿಸಿ ಸೆಕ್ಷನ್‌ 498ಎ ಕಾನೂನು ದುರ್ಬಳಕೆ ಮಾಡುವ ಬಗ್ಗೆ ಪತಿ ಮತ್ತವರ ಕುಟುಂಬ ಸದಸ್ಯರು ಎಚ್ಚರಿಕೆಯಿಂದ ಇರಬೇಕು ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.