ಸಾರಾಂಶ
ಶ್ರೀರಂಗಪಟ್ಟಣ : ಸ್ನೇಹಿತರೊಂದಿಗೆ ತಾಲೂಕಿನ ಬೆಳಗೊಳದ ಬಲಮುರಿಗೆ ಆಗಮಿಸಿದ್ದ ವಿದ್ಯಾರ್ಥಿ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೈಸೂರಿನ ನಾಗನಹಳ್ಳಿ ನಿವಾಸಿ ಶಿವರಾಜುರ ಪುತ್ರ ಶರತ್.ಎಸ್ (19) ಮೃತ ಯುವಕ. ಈತ ಎಂಐಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಬುಧವಾರ ತನ್ನ 3 ಮಂದಿ ಸ್ನೇಹಿತರೊಂದಿಗೆ ಬಲಮುರಿ ಬಳಿಯ ಕಾವೇರಿ ನದಿಯಲ್ಲಿ ಆಟವಾಡಿ ನಂತರ ಈಜಲು ತೆರಳಿದ್ದಾರೆ.
ಈ ವೇಳೆ ಶರತ್.ಎಸ್ ಈಜಲು ಬಾರದೆ ನದಿಯಲ್ಲಿ ಮುಳಗುತ್ತಿದ್ದ ವೇಳೆ ದಡದಲ್ಲಿದ್ದ ಸ್ನೇಹಿತರ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು, ನದಿಗೆ ಹಾರಿ ಶರತ್‌ನನ್ನು ಉಳಿಸಲು ಪ್ರಯತ್ನಿಸಿದ್ದಾದರೂ ಅಷ್ಟರಲ್ಲಿ ನೀರು ಕುಡಿದು ಮೃತಪಟ್ಟಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೆಆರ್‌ಎಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಕಿಚ್ಚು ಹಾಯಿಸುವ ವೇಳೆ ಗೂಳಿಗುದ್ದಿ ವ್ಯಕ್ತಿಗೆ ಗಂಭೀರ ಗಾಯ
ಮಂಡ್ಯ : ರಾಜುಗಳ ಕಿಚ್ಚು ಹಾಯಿಸುವ ವೇಳೆ ಜನರ ಬಳಿಗೆ ನುಗ್ಗಿದ ಗೂಳಿಯೊಂದು ವ್ಯಕ್ತಿಯೊಬ್ಬರಿಗೆ ಗುದ್ದಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಗರದ ಹೊಸಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಕಿಚ್ಚು ಹಾಯಿಸಿಕೊಂಡು ಮುನ್ನುಗುವ ಸಮಯದಲ್ಲಿ ಬೆದರಿದ ಗೂಳಿ ಜನರು ನಿಂತಿದ್ದ ಕಡೆಗೆ ನುಗ್ಗಿದೆ. ಕಿಚ್ಚು ಹಾಯಿಸುವುದನ್ನು ನೋಡುತ್ತಾ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಜೋರಾಗಿ ಗುದ್ದಿದೆ. ಗೂಳಿ ಗುತ್ತಿದ ರಭಸಕ್ಕೆ ವ್ಯಕ್ತಿ ಪಲ್ಟಿ ಹೊಡೆದಿದ್ದು ತೀವ್ರ ಗಾಯಗೊಂಡನು.
ಸ್ಥಳದಲ್ಲಿದ್ದ ಮಂಡ್ಯ ಪೂರ್ವ ಠಾಣೆ ಸಬ್ ಇನ್ಸ್ಪೆಕ್ಟರ್ ಎಸ್. ಶೇಷಾದ್ರಿ ಅವರು ಗಾಯಾಳುವನ್ನು ತಮ್ಮ ಜೀಪ್ನಲ್ಲಿ ಮಿನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದರೊಂದಿಗೆ ಮಾನವೀಯತೆ ಮೆರೆದಿದ್ದಾರೆ.