ಸಾರಾಂಶ
ರಾಯಚೂರು : ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ.ಯಿಂದ ಬಂಧನದ ಭೀತಿ ಎದುರಿಸುತ್ತಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಶನಿವಾರ ರಾತ್ರಿ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿದ್ದರು. ಬಳಿಕ, ನಾಪತ್ತೆಯಾಗಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ.ಅಧಿಕಾರಿಗಳು ಶುಕ್ರವಾರ ರಾತ್ರಿ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸುತ್ತಿದ್ದಂತೆ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ನಾಪತ್ತೆಯಾಗಿದ್ದರು. ಈ ಮಧ್ಯೆ, ಮೂರು ದಿನಗಳ ಕಾಲ ರಾಯಚೂರು ನಗರದಲ್ಲಿ ಬೀಡು ಬಿಟ್ಟಿದ್ದ ಇ.ಡಿ. ಅಧಿಕಾರಿಗಳು ಶುಕ್ರವಾರ ರಾತ್ರಿ ಸಾರಿಗೆ ಸಂಸ್ಥೆಯ ಬಸ್ ಮುಖಾಂತರ ಬೆಂಗಳೂರಿಗೆ ಪ್ರಯಾಣಿಸಿದ್ದರು.
ಎಸ್‌ಐಟಿ ವಿಚಾರಣೆಗಾಗಿ ಇಷ್ಟು ದಿನ ಬೆಂಗಳೂರಿನಲ್ಲಿಯೇ ಇದ್ದ ಬಸನಗೌಡ ದದ್ದಲ್, ಶನಿವಾರ ರಾತ್ರಿ ರಾಯಚೂರು ನಗರಕ್ಕೆ ಆಗಮಿಸಿ, ವಿಶ್ರಾಂತಿ ಪಡೆದು ಭಾನುವಾರ ಬೆಳಗ್ಗೆ ಖಾಸಗಿ ವಾಹನದಲ್ಲಿ ಮಂತ್ರಾಲಯದ ರಸ್ತೆ ಕಡೆ ಹೋಗಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದ ಯರಗೇರಾ, ಗಿಲ್ಲೆಸುಗೂರು ಕ್ಯಾಂಪ್ ನಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿ ಆಪ್ತರ ಜೊತೆ ಮಂತ್ರಾಲಯಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ಅಲ್ಲಿಂದ ಯಾವ ಕಡೆ ಹೋಗಿದ್ದಾರೆ ಎಂಬುದು ಗೊತ್ತಾಗಿಲ್ಲ. ಸೋಮವಾರದಿಂದ ಅಧಿವೇಶನ ಆರಂಭಗೊಳ್ಳುತ್ತಿರುವುದರಿಂದ ದದ್ದಲ್ ಅವರು ಬೆಂಗಳೂರಿಗೆ ತೆರಳಿರಬಹುದು ಎಂದು ಹೇಳಲಾಗುತ್ತಿದೆ.
)
)
;Resize=(128,128))
;Resize=(128,128))
;Resize=(128,128))
;Resize=(128,128))