ಶಾಸಕ ಮುನಿರತ್ನ ವಿರುದ್ಧ ವೋಟರ್‌ ಐಡಿ ಹಗರಣ ತನಿಖೆ ವಿಳಂಬ :ಮಾಜಿ ಎಂಎಲ್‌ಸಿ ಮುನಿರಾಜುಗೌಡ ದೂರು

| Published : Oct 20 2024, 01:53 AM IST / Updated: Oct 20 2024, 04:41 AM IST

ಸಾರಾಂಶ

ಶಾಸಕ ಮುನಿರತ್ನ ವಿರುದ್ಧ ವೋಟರ್‌ ಐಡಿ ಹಗರಣದ ತನಿಖೆ ವಿಳಂಬವಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮಾಜಿ ಎಂಎಲ್‌ಸಿ ಮುನಿರಾಜುಗೌಡ ದೂರು ನೀಡಿದ್ದಾರೆ.

 ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧದ ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣದ ತನಿಖೆ ಸಂಬಂಧ ಹೈಕೋರ್ಟ್‌ನ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪ ಎಸೆಗಿರುವ ತನಿಖಾಧಿಕಾರಿಗಳು ಹಾಗೂ ಪ್ರಕರಣದ ಉಸ್ತುವಾರಿಗಳಾಗಿದ್ದ ಡಿಸಿಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ವಿಧಾನ ಪರಿಷತ್‌ ಸದಸ್ಯ ಪಿ.ಎಂ.ಮುನಿರಾಜುಗೌಡ ಅವರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದಗೆ ಶನಿವಾರ ದೂರು ನೀಡಿದ್ದಾರೆ.

ನಕಲಿ ವೋಟರ್‌ ಐಟಿ ಹಗರಣ ಸಂಬಂಧ ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ 2018ರಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಅಪರಾಧ ಸಂಖ್ಯೆ 55ರ ಪ್ರಕರಣದ ಕಡತವು 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇದಕ್ಕೆ ಜೋಡಣೆಯಾಗಿರುವ ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು ಜಾಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ಗಳು ಮತ್ತು ಪೂರ್ವ ವಿಭಾಗದ ಡಿಸಿಪಿಗಳು ಸೇರಿಕೊಂಡು ಮುನಿರತ್ನನನ್ನು ಬಂಧನದಿಂದ ಪಾರು ಮಾಡಲು ನ್ಯಾಯಾಲಯವನ್ನು ಯಾಮಾರಿಸಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ. ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು ವಿಚಾರಣಾಧಿಕಾರದ ವ್ಯಾಪ್ತಿಯೇ ಇರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಉಳಿಸಿದ್ದಾರೆ. ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ಈ ಪ್ರಕರಣದಲ್ಲಿ ತನಿಖೆ ಮಾಡಿರುವ ಸಬ್‌ ಇನ್‌ಸ್ಪೆಕ್ಟರ್‌ಗಳು ಮತ್ತು ಇನ್‌ಸ್ಪೆಕ್ಟರ್‌ಗಳು ಹಾಗೂ ಪ್ರಕರಣದ ಉಸ್ತುವಾರಿ ವಹಿಸಿದ್ದ ಪೂರ್ವ ವಿಭಾಗದ ಎಲ್ಲಾ ಡಿಸಿಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು 8ನೇ ಎಸಿಎಂಎಂ ನ್ಯಾಲಯದಿಂದ ಪ್ರಕರಣದ ವಿಚಾರಣಾಧಿಕಾರದ ವ್ಯಾಪ್ತಿಯುಳ್ಳ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು. ಸಾಕ್ಷಿಗಳ ಹೇಳಿಕೆ ದಾಖಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘನೆ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಎಂಎಲ್ಸಿ ಮುನಿರಾಜುಗೌಡ, ಆರ್‌.ಆರ್‌.ನಗರ ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣ ಹೈಕೋರ್ಟ್‌ನಲ್ಲಿ ಇದ್ದರೂ ತನಿಖೆ ಮುಂದುವರೆದಿಲ್ಲ. ಹೀಗಾಗಿ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದೇವೆ. ಮೂರು ಮುಕ್ಕಾಲು ವರ್ಷದ ಹಿಂದೆ ಈ ಪ್ರಕರಣಗಳ ತನಿಖೆಗೆ ಐಪಿಎಸ್‌ ಅಧಿಕಾರಿಯನ್ನು ನೇಮಿಸಬೇಕು ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶ ಪಾಲಿಸಿಲ್ಲ.

ಜಾಲಹಳ್ಳಿ ಠಾಣೆ ಪೊಲೀಸರು ತನಿಖೆ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರತ್ಯಕ್ಷ್ಯ ಸಾಕ್ಷಿಗಳಿಗೆ ಮುನಿರತ್ನ ಬೆದರಿಕೆ ಹಾಕಿದ್ದಾರೆ. ಆರು ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ನಾನು ಬಿಜೆಪಿಯಲ್ಲಿ ಇದ್ದರೂ ಈ ಬಗ್ಗೆ ಹೋರಾಟ ಮಾಡುತ್ತಿದ್ದೇನೆ. ಈ ಸಂಬಂಧ ರಾಜ್ಯಪಾಲರು ಮತ್ತು ನ್ಯಾಯಾಧೀಶರಿಗೂ ದೂರು ಕೊಡುವುದಾಗಿ ಹೇಳಿದರು.