ಸಾರಾಂಶ
ಹಣ ಡಬ್ಲಿಂಗ್ ಹಾಗೂ ನನ್ನ ಬಳಿ ಇರುವ 250 ಕೋಟಿ ರು. ಹಣಕ್ಕೆ ಟಿಡಿಎಸ್ ಕಟ್ಟಬೇಕು ಎಂದು ಜನರನ್ನು ನಂಬಿಸಿದ ವ್ಯಕ್ತಿಯೊಬ್ಬ 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರು. ಹಣ ವಂಚಿಸಿರುವ ಘಟನೆ ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ನಡೆದಿದೆ.
ಮಂಡ್ಯ : ಹಣ ಡಬ್ಲಿಂಗ್ ಹಾಗೂ ನನ್ನ ಬಳಿ ಇರುವ 250 ಕೋಟಿ ರು. ಹಣಕ್ಕೆ ಟಿಡಿಎಸ್ ಕಟ್ಟಬೇಕು ಎಂದು ಜನರನ್ನು ನಂಬಿಸಿದ ವ್ಯಕ್ತಿಯೊಬ್ಬ 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರು. ಹಣ ವಂಚಿಸಿರುವ ಘಟನೆ ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ನಡೆದಿದೆ.
ಮೂಲತಃ ಮೈಸೂರು ಜಿಲ್ಲೆ ಹುಣಸೂರು ಗ್ರಾಮದ ಡಿ.ಎನ್.ನಾಗರಾಜು ಎಂಬಾತನೇ ಹಣ ವಂಚಿಸಿರುವ ವ್ಯಕ್ತಿಯಾಗಿದ್ದು, ಜಿ.ಕೆಬ್ಬಹಳ್ಳಿ ಗ್ರಾಮದ ಕೆ.ಎಸ್.ಚೇತನ್ ಮತ್ತು ಇತರರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಯನ್ನು ಉಡುಪಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಹುಣಸೂರಿನ ಕೆಂಪಯ್ಯ ಮತ್ತು ಈತನ ಮಗ ಚಿಕ್ಕನರಸಯ್ಯ ದ್ಯಾಪಸಂದ್ರ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾ ಅವರಿವರ ಬಳಿ ಸಾಲ ಮಾಡಿ ಊರು ಬಿಟ್ಟು ಹೋಗಿದ್ದರು. 2020-21ನೇ ಸಾಲಿನಲ್ಲಿ ಚಿಕ್ಕನರಸಯ್ಯನ ಮಗ ಡಿ.ಎನ್.ನಾಗರಾಜು ದ್ಯಾಪಸಂದ್ರ ಗ್ರಾಮಕ್ಕೆ ಬಂದು ಗ್ರಾಮದ ಡಿ.ಆರ್.ಚಂದ್ರಶೇಖರ, ನಾಗಯ್ಯ ಎಂಬುವರೊಂದಿಗೆ ಸಂಪರ್ಕವಿಟ್ಟುಕೊಂಡಿದ್ದನು.
ಪೊಲೀಸ್ ಕಮಿಷನರ್ ಕೋದಂಡರಾಮಯ್ಯ ನನಗೆ ತುಂಬಾ ಹತ್ತಿರವಿದ್ದು, ಅವರ ಬಳಿ ಸಾವಿರಾರು ಕೋಟಿ ರು. ಹಣವಿದೆ. ಈ ಸಾವಿರಾರು ಕೋಟಿ ರು. ಹಣದ ಪೈಕಿ 250 ಕೋಟಿ ರು. ಹಣ ನನ್ನ ಖಾತೆಗೆ ಜಮಾ ಆಗಿದೆ. ಇದನ್ನು ಚಲಾವಣೆ ಮಾಡಲು ಟಿಡಿಎಸ್ ಕಟ್ಟಬೇಕು ಎಂದು ನಂಬಿಸಿ ರಾಮಲಿಂಗೇಗೌಡ ಎಂಬುವರಿಂದ 2 ಕೋಟಿ ರು.ಗಳನ್ನು ಪಡೆದುಕೊಂಡಿದ್ದರು ಎಂದು ದೂರಿದ್ದಾರೆ.
ಗ್ರಾಮದ ಇನ್ನೂ ಹಲವು ಜನರಿಗೆ ಇದೇ ರೀತಿ ನಂಬಿಸಿ ಫೋನ್ ಪೇ ಹಾಗೂ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಕೊಟ್ಟಿದ್ದಾರೆ. ಈ ವಿಷಯ ಕೆ.ಎಸ್.ಚೇತನ್ ಅವರಿಗೆ ತಿಳಿದು ಜಿ.ಕೆಬ್ಬಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಸ್ನೇಹಿತರಿಗೂ ವಿಚಾರ ಹಬ್ಬಿತು. ಕೆ.ಎಸ್.ಚೇತನ್ ಅವರು ಇದೇ ವಿಚಾರವಾಗಿ ಡಿ.ಎನ್.ನಾಗರಾಜುನನ್ನು ಖುದ್ದಾಗಿ ಡಿ.ಆರ್.ಚಂದ್ರಶೇಖರ್ ಮುಖಾಂತರ ಸಂಪರ್ಕಿಸಿ ಮಾತನಾಡಿದಾಗ, ನೀವು ನನಗೆ ಒಂದು ಲಕ್ಷ ರು. ಹಣವನ್ನು ನೀಡಿದರೆ ನಾನು ಒಂದು ತಿಂಗಳ ಬಳಿಕ ನಂತರ 10 ಲಕ್ಷ ರು. ಹಣ ನೀಡುವುದಾಗಿ ಆಸೆ ಹುಟ್ಟಿಸಿದನು ಎನ್ನಲಾಗಿದೆ.
ಈತನ ಮಾತುಗಳಿಗೆ ಮರುಳಾದ ಕೆ.ಎಸ್.ಚೇತನ್ 38 ಲಕ್ಷ ರು. ಹಣ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರ ಬಳಿ ಕೋಟಿಗಟ್ಟಲೆ ಹಣ ಪಡೆದು ಮೋಸ ಮಾಡಿ ಗ್ರಾಮ ತೊರೆದು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.
ಕೆ.ಎಸ್.ಚೇತನ್ ಸೇರಿದಂತೆ ಹಲವಾರು ಜನರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಆಡಿಟರ್ ರಘುನಾಥ್ ಅವರ ಕಚೇರಿಯಲ್ಲಿ ಸುಮಾರು ಜನರಿಗೆ ಐಟಿ ಪೈಲ್ ಮಾಡಿಸಿ ತನ್ನ ಮೇಲೆ ಯಾರಿಗೂ ಅನುಮಾನ ಬರದಂತೆ ಕೋಟಿಗಟ್ಟಲೆ ಹಣ ಪಡೆದುಕೊಂಡಿದ್ದಾನೆ ಎಂದು ದೂರಲಾಗಿದೆ.
ಈತ ಕೂಲಿ ಕೆಲಸದವನಾಗಿದ್ದರೂ ಬಹಳ ಚಾಣಾಕ್ಯ ವ್ಯಕ್ತಿಯಾಗಿದ್ದು, ಈತನಿಗೆ ಮೂವರು ಪತ್ನಿಯರಿದ್ದು ಎಲ್ಲರಿಗೂ ಒಡವೆ, ವಸ್ತ್ರ, ಮನೆ, ಸೈಟ್‌ಗಳನ್ನು ಮಾಡಿಕೊಟ್ಟಿದ್ದಾನೆ. ಆಡಿಟರ್ ರಘುನಾಥ ಬಳಿ 25 ಕೋಟಿ ರು. ಹಣವಿದ್ದು, ಆ ಹಣವನ್ನು ನಿಮಗೆ ಹಂತ ಹಂತವಾಗಿ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಮೈಸೂರಿನ ಚಾಮರಾಜ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಲಾಕರ್‌ನಲ್ಲಿ ಎರಡೂವರೆ ಕೋಟಿ ರು. ಹಣವಿದೆ. ಅದನ್ನು ನಿಮಗೆ ಕೊಡುತ್ತೇನೆಂದು ಬ್ಯಾಂಕಿಗೆ ಕರೆದುಕೊಂಡು ಹೋಗಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕೆ.ಎಸ್.ಚೇತನ್ ಹಾಗೂ ಇತರರಿಂದ ದೂರನ್ನು ಸ್ವೀಕರಿಸಿದ ಕೆರಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉಡುಪಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.
ಅಂದು ಅಪ್ಪ, ಇಂದು ಮಗನಿಂದ ಗ್ರಾಮಸ್ಥರಿಗೆ ಮೋಸ
ಕಳೆದ ಹತ್ತು ವರ್ಷಗಳ ಹಿಂದೆ ಚಿಕ್ಕನರಸಯ್ಯ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಈ ವೇಳೆ ಗ್ರಾಮದ ಹಲವು ಜನರ ಬಳಿ ಸಾಲ ಮಾಡಿ ನಂತರ ಊರು ಬಿಟ್ಟು ಹೋಗಿದ್ದನು. ಈಗ ಈತನ ಪುತ್ರ ಡಿ.ಎನ್.ನಾಗರಾಜು ಕೂಡ ಗ್ರಾಮಕ್ಕೆ ಆಗಮಿಸಿ ಕೆಲವರ ಸಂಪರ್ಕ ಪಡೆದು ಗ್ರಾಮದ 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರು. ಹಣ ವಂಚಿಸಿದ್ದಾನೆ. ಅಂದು ಅಪ್ಪ, ಇಂದು ಮಗನಿಂದ ಗ್ರಾಮಸ್ಥರು ಮೋಸದಂತಾಗಿದೆ.ಯಾವುದೋ ದಾಖಲೆಗಳನ್ನಿಟ್ಟುಕೊಂಡು ಟಿಡಿಎಸ್ ಕಟ್ಟಿದರೆ 250 ಕೋಟಿ ಹಣ ಬರುತ್ತದೆ ಎಂದು ನಂಬಿಸಿ ಜನರಿಂದ ಹಣ ಪಡೆದು ಸುಮಾರು 2 ಕೋಟಿ ರು.ಗಿಂತ ಹೆಚ್ಚುಹಣ ವಂಚಿಸಿದ್ದಾನೆ. ಇದಲ್ಲದೆ ರೈಸ್‌ಫುಲ್ಲಿಂಗ್ ಮತ್ತು ಹಣ ಡಬ್ಲಿಂಗ್ ಹೆಸರಿನಲ್ಲೂ ಹಣ ವಸೂಲಿ ಮಾಡಿದ್ದಾನೆ. ಸದ್ಯ ಆರೋಪಿ ಡಿ.ಎನ್.ನಾಗರಾಜು ಪೊಲೀಸ್ ಕಸ್ಟಡಿಯಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ.
- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ