ಸಾರಾಂಶ
ಬೆಂಗಳೂರು : ರಸ್ತೆ ಬದಿ ಅಂಗಡಿಗಳಿಂದ ಹಣ ಸುಲಿಗೆ ಆರೋಪ ಹೊತ್ತಿದ್ದ ರಾಜಗೋಪಾಲನಗರ ಪೊಲೀಸ್ ಠಾಣೆ ಹೊಯ್ಸಳ ವಾಹನದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹಾಗೂ ಹೆಡ್ ಕಾನ್‌ಸ್ಟೇಬಲ್ ಅವರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಬುಧವಾರ ಅಮಾನತುಗೊಳಿಸಿದ್ದಾರೆ.
ಎಎಸ್‌ಐ ರಾಮಲಿಂಗಯ್ಯ ಹಾಗೂ ಹೆಡ್ ಕಾನ್‌ಸ್ಟೇಬಲ್ ಪ್ರಸನ್ನಕುಮಾರ್ ಅಮಾನತುಗೊಂಡಿದ್ದು, ಈ ಇಬ್ಬರ ವಿರುದ್ಧ ಪೀಣ್ಯ ಉಪ ವಿಭಾಗದ ಎಸಿಪಿ ಅವರಿಗೆ ಇಲಾಖಾ ಮಟ್ಟದ ವಿಚಾರಣೆ ನಡೆಸುವಂತೆ ಆಯುಕ್ತರು ಸೂಚಿಸಿದ್ದಾರೆ.
ಇತ್ತೀಚಿಗೆ ಗಸ್ತಿನಲ್ಲಿದ್ದ ವೇಳೆ ರಸ್ತೆ ಬದಿ ವ್ಯಾಪಾರಿಗಳಿಂದ ಹಣ ಪಡೆಯುವಾಗ ಹೊಯ್ಸಳ ಸಿಬ್ಬಂದಿಯನ್ನು ಸಾರ್ವಜನಿಕರು ಪ್ರಶ್ನಿಸಿದ್ದರು. ಆಗ ಅಲ್ಲಿಂದ ತೆರಳುವಾಗ ಹೊಯ್ಸಳ ವಾಹನದ ಹಿಂದೆ ಸಾರ್ವಜನಿಕರು ‘ಕಳ್ಳ ಕಳ್ಳ’ ಎಂದು ಕೂಗುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಘಟನೆ ಬಗ್ಗೆ ವರದಿ ನೀಡುವಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರಿಗೆ ಆಯುಕ್ತರು ಸೂಚಿಸಿದ್ದರು. ಈ ವರದಿ ಆಧರಿಸಿ ಎಎಸ್‌ಐ ರಾಮಲಿಂಗಯ್ಯ ಹಾಗೂ ಎಚ್‌ಸಿ ಪ್ರಸನ್ನ ಕುಮಾರ್ ಅವರನ್ನು ದಯಾನಂದ್ ಅಮಾನತುಗೊಳಿಸಿದ್ದಾರೆ. ಆದರೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿರುವ ಎಎಸ್‌ಐ ಹಾಗೂ ಎಚ್‌ಸಿ ಅವರು, ತಾವು ಹೋಟೆಲ್‌ನಲ್ಲಿ ಊಟ ಹಾಗೂ ನೀರಿನ ಬಾಟಲ್ ಪಡೆದಿದ್ದಾಗಿ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.
ಎಸಿಪಿ, ಇನ್‌ಸ್ಪೆಕ್ಟರ್‌ಗೆ ಕೊಲೆ ಬೆದರಿಕೆ ಬಂದಿಲ್ಲ: ಸ್ಪಷ್ಟನೆ
ಬೆಂಗಳೂರು : ಬಾಣಸವಾಡಿ ಉಪ ವಿಭಾಗದ ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ಅವರಿಗೆ ಕಾನ್‌ಸ್ಟೇಬಲ್‌ವೊಬ್ಬರಿಂದ ಬೆದರಿಕೆ ಕರೆ ಬಂದಿಲ್ಲ ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್.ಜೈನ್ ಸ್ಪಷ್ಟಪಡಿಸಿದ್ದಾರೆ.
ದೈನಂದಿನ ಠಾಣಾ ಕರ್ತವ್ಯದಲ್ಲಿ ಕಾನ್‌ಸ್ಟೇಬಲ್ ನಿರತರಾಗಿದ್ದು, ಅವರು ಕಡ್ಡಾಯ ರಜೆ ಮೇಲೆ ತೆರಳಿಲ್ಲ. ಹಾಗೆಯೇ ಎಸಿಪಿ ಹಾಗೂ ಪಿಐ ಅವರಿಗೆ ಸಿಬ್ಬಂದಿ ಬೆದರಿಕೆ ಹಾಕಿದ್ದಾಗಲಿ ಅಥವಾ ಸ್ವೀಕರಿಸಿದ್ದಾಗಲಿ ವರದಿಯಾಗಿಲ್ಲ. ಆ ಸಿಬ್ಬಂದಿಗೆ ಕೌಟುಂಬಿಕ ಸಮಸ್ಯೆಗಳಲ್ಲಿ ಸಿಲುಕಿದ್ದು, ಅವರು ಕೌನ್ಸೆಲಿಂಗ್ ಸಹ ಪಡೆದಿದ್ದಾರೆ ಎಂದು ಡಿಸಿಪಿ ಖಚಿತಪಡಿಸಿದ್ದಾರೆ.
ಇತ್ತೀಚಿಗೆ ರೌಡಿ ಕಾರ್ತಿಕೇಯನ್ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ತಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದರು ಎಂದು ಬಾಣಸವಾಡಿ ಉಪ ವಿಭಾಗದ ಎಸಿಪಿ ಹಾಗೂ ಪಿಐ ಅವರಿಗೆ ಚಾಕುವಿನಿಂದ ಇರಿದು ಕೊಲ್ಲುವುದಾಗಿ ಕಾನ್‌ಸ್ಟೇಬಲ್ ರೇಣುಕಾ ನಾಯಕ್ ಬೆದರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.