ಸಾರಾಂಶ
ಹಲಗೂರು : ಮೈಕ್ರೋ ಫೈನಾನ್ಸ್ ಕಿರುಕುಳ ಹಿನ್ನೆಲೆಯಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮನನೊಂದ ಪುತ್ರನು ಸಹ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಹಲಗೂರಿನಲ್ಲಿ ನಡೆದಿದೆ.
ಸಮೀಪದ ಕೊನ್ನಾಪುರ ಗ್ರಾಮದ ಅಂದಾನಯ್ಯರ ಪುತ್ರ ಕೆ.ಎ.ರಂಜಿತ್ (30) ಮೃತಪಟ್ಟ ದುರ್ದೈವಿ.
ಸಾಲದ ಕಂತುಗಳನ್ನು ಪಾವತಿಸಿಲ್ಲ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಯವರು ಇತ್ತೀಚೆಗೆ ರಂಜಿತ್ ಅವರ ಮನೆಯನ್ನು ಜಪ್ತಿ ಮಾಡಿದ್ದರು. ಇದರಿಂದ ಮನನೊಂದಿದ್ದ ತಾಯಿ ಜ.27ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿಚಾರ ತಿಳಿದ ಪುತ್ರ ಅಂದಿನಿಂದಲೂ ನಾಪತ್ತೆಯಾಗಿದ್ದರು. ಸಂಬಂಧಿಕರ ಮನೆಗಳಲ್ಲೂ ಕುಟುಂಬದ ಸದಸ್ಯರು ಹುಡುಕಾಟ ಮಾಡಿದ್ದರು. ಪತ್ತೆಯಾಗದ ನಂತರ ರಂಜಿತ್ ಇಲ್ಲದೇ ತಾಯಿ ಪ್ರೇಮಾ ಅವರ ಅಂತ್ಯಕ್ರಿಯೆ ನಡೆಸಿದ್ದರು.
ಅನಾರೋಗ್ಯಕ್ಕೆ ತುತ್ತಾಗಿದ್ದ ರಂಜಿತ್ ಅಂಗವೈಕಲ್ಯದಿಂದ ಬಳಲುತ್ತಿದ್ದರು. ತಾಯಿ ಸಾವಿನ ಆಘಾತದಿಂದ ಮನನೊಂದಿದ್ದ ರಂಜಿತ್ ಮುಂದೆ ಜೀವನ ಹೇಗೆ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶನಿವಾರ ಬೆಳಗ್ಗೆ ಹಲಗೂರು ಕೆರೆಯಲ್ಲಿ ರಂಜಿತ್ ಮೃತದೇಹ ಪತ್ತೆಯಾಗಿದೆ.
ಪ್ರೇಮಾ ಜೊತೆಗೆ ರಂಜಿತ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ವಿಷಯ ತಿಳಿದ ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಕೇಸು ದಾಖಲು ಮಾಡಿಕೊಂಡಿದ್ದಾರೆ.