ಆಸ್ತಿ ವಿಚಾರಕ್ಕೆ ಸೋದರ ಅತ್ತೆ ಕೊಲೆ: ಇಬ್ಬರ ಸೆರೆ

| Published : Jun 13 2024, 01:47 AM IST / Updated: Jun 13 2024, 05:11 AM IST

ಸಾರಾಂಶ

ಆಸ್ತಿ ವಿಚಾರವಾಗಿ ಸೋದರ ಅತ್ತೆಯನ್ನೇ ಕೊಂದ ಅಳಿಯ, ದೂರದ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು  : ಆಸ್ತಿ ವಿಚಾರವಾಗಿ ಸೋದರ ಅತ್ತೆಯನ್ನೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಆರೋಪದಡಿ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆ ನಿವಾಸಿ ಸೋಮಿನಿ ಸತ್ಯಭಾಮಾ (46) ಕೊಲೆಯಾದ ದುರ್ದೈವಿ. ಈ ಸಂಬಂಧ ಕೊಲೆಯಾದ ಮಹಿಳೆಯ ಅಣ್ಣನ ಮಗ ಚಾಮರಾಜಪೇಟೆ ನಿವಾಸಿಗಳಾದ ಸಾಗರ್‌ (25) ಮತ್ತು ದೂರದ ಸಂಬಂಧಿ ಅಕಾಶ್‌ (26) ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಸತ್ಯಭಾಮಾ ವೃತ್ತಿಯಲ್ಲಿ ಸ್ಟಾಫ್‌ ನರ್ಸ್‌ ಆಗಿದ್ದು, ಐಟಿಸಿ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳಲು ಹೋಟೆಲ್‌ನ ಪಾರ್ಕಿಂಗ್‌ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಏಕಾಏಕಿ ಆಕೆಯ ಮೇಲೆ ಮುಗಿಬಿದ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸತ್ಯಭಾಮಾ ಆಸ್ಪತ್ರೆಗೆ ಕರೆದೊಯ್ಯವ ವೇಳೆಗೆ ಮೃತಪಟ್ಟಿದ್ದಾರೆ.

ಕೊಲೆಯಾದ ಸತ್ಯಭಾಮಾ ಮತ್ತು ಆರೋಪಿ ಆಕಾಶ್‌ ಮನೆಯವರಿಗೂ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ಗಲಾಟೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಆಕಾಶ್‌ ಹಾಗೂ ಸಾಗರ್‌ ಸಂಚು ರೂಪಿಸಿ ಕಾದು ಸತ್ಯಭಾಮಾ ಅವರನ್ನು ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.