ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಹಾಗೂ ಏಳನೇ ಆರೋಪಿ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ವಜಾ ಮಾಡಿದೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಹಾಗೂ ಏಳನೇ ಆರೋಪಿ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ವಜಾ ಮಾಡಿದೆ.
ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಶನಿವಾರ ತೀರ್ಪು ಪ್ರಕಟಿಸಿತು. ಕೃತ್ಯ ಭೀಕರವಾಗಿದ್ದು, ಕೇವಲ ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ .ಮೃತನಿಗೆ ಊಹಿಸಲಾಗದಷ್ಟು ಚಿತ್ರಹಿಂಸೆ ನೀಡಲಾಗಿದೆ. ಆರೋಪಿ ಸ್ಥಳದಲ್ಲಿ ಇದ್ದದ್ದನ್ನು ಇಬ್ಬರು ಪ್ರತ್ಯಕ್ಷದರ್ಶಿಗಳು ಗುರುತಿಸಿದ್ದಾರೆ ಎಂದು ಪ್ರತಿವಾದಿಗಳು ಹೇಳಿದ್ದಾರೆ. ಮುಖ್ಯವಾಗಿ ಪವಿತ್ರಾ ಧರಿಸಿದ್ದ ಬಟ್ಟೆಯಲ್ಲಿ ಮೃತನ ಡಿಎನ್‌ಎ ಪತ್ತೆಯಾಗಿದೆ. ಹಾಗೂ ಅಪರಾಧಕ್ಕೆ ಬಳಕೆಯಾದ ಕಾರಿನಲ್ಲಿ ಇವರು ಪ್ರವೇಶಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿದೆ ಎಂದು ಕಾರಣ ನೀಡಿತು.
ಮತ್ತೊಬ್ಬ ಆರೋಪಿ, ಅನುಕುಮಾರ್ ಅಪರಾಧ ಸ್ಥಳದ ಉದ್ದಕ್ಕೂ ಇರುವುದು ಕಂಡುಬಂದಿದ್ದು, ತನಿಖೆ ಇನ್ನೂ ಬಾಕಿ ಇದೆ. ಇವರ ಬಟ್ಟೆಯ ಮೇಲೆಯೂ ಡಿಎನ್‌ಎ ಪತ್ತೆಯಾಗಿದೆ. ಮುಖ್ಯವಾಗಿ ಇತರ ಆರೋಪಿಗಳ ಜೊತೆ ಸೇರಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿರುವ ಆರೋಪವಿದೆ ಎಂದು ಹೇಳಿ ಜಾಮೀನು ನಿರಾಕರಿಸಿತು.
ಪವಿತ್ರಾ ಗೌಡ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಸೆಬಾಸ್ಟಿಯನ್, ರೇಣುಕಾಸ್ವಾಮಿ ಕೊಲೆಯಲ್ಲಿ ಪವಿತ್ರಾ ಅವರ ಯಾವುದೇ ಪಾತ್ರವಿಲ್ಲ. ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.